

ಕೆ.ಆರ್.ಪೇಟೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ದಿನಸಿ ಸಾಮಗ್ರಿಗಳು, ಬಟ್ಟೆ, ಟಿವಿ, ಮೊಬೈಲ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.
ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸೋಮಶೇಖರ್ ಮನೆಯಲ್ಲಿ ಅವಘಡ ಸಂಭವಿಸಿದ್ದು, ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ. ಇದರಿಂದಾಗಿ ಕುಟುಂಬವು ಬೀದಿ ಬಿದ್ದಿದೆ.
ಸೋಮಶೇಖರ್, ಪತ್ನಿ ಗಾಯತ್ರಿ ಮನೆಗೆ ಬೀಗ ಹಾಕಿಕೊಂಡು ಕೂಲಿ ಕೆಲಸಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮನೆಯೊಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಮನೆಯೊಳಗಿದ್ದ ಅಕ್ಕಿ, ರಾಗಿ, ಬಟ್ಟೆಗಳು, ಟಿವಿ, ಹಾಸಿಗೆ ಸೇರಿದಂತೆ ವಿವಿಧ ಬಗೆಯ ದಿನಬಳಕೆಯ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
ಮನೆಯಲ್ಲಿ ಬೆಂಕಿ ಹೊಗೆಯಾಡುತ್ತಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟಕ್ಕೂ ಕಡಿಮೆಯಾಗದೆ ಇರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿ ಅಕ್ಕಪಕ್ಕದ ಮನೆಗೆ ಬೆಂಕಿ ಹೊತ್ತಿಕೊಳ್ಳದಂತೆ ತಡೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.