ಜೋರು ಮಳೆಯಿಂದ ತಂಬಾಕು, ಶುಂಠಿ ಬೆಳೆಗೆ ಹಾನಿ

12hun7
ಮುತ್ತುರಾಯನ ಹೊಸಹಳ್ಳಿಯಲ್ಲಿ ಮಳೆಯಿಂದಾಗಿ ತಂಬಾಕು ಸಸಿಯನ್ನು ಕೊಚ್ಚಿ ಹೊತ್ತೊಯ್ದಿದೆ.
Published on

ಹನಗೋಡು: ಹೋಬಳಿಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಜೋರು ಮಳೆಗೆ ಬೆಳೆ ಕೊಚ್ಚಿ ಹೋಗಿದ್ದು, ಪಾರ ನಷ್ಟವಾಗಿದೆ. ಕೆರೆ, ಕಟ್ಟೆಗಳು ಭರ್ತಿಯಾಗಿವೆ.

ಜೋರು ಮಳೆಯಿಂದಾಗಿ ಮುತ್ತುರಾಯನ ಹೊಸಳ್ಳಿ, ಕಲ್ಲಹಳ್ಳಿ, ಆಡಿಗನಹಳ್ಳಿ, ಹರೀನಹಳ್ಳಿ, ಕರ್ಣಕುಪ್ಪೆ, ಕಣಗಾಲು, ಮದ್ಲಿಮನುಗನಹಳ್ಳಿ ಸುತ್ತಮುತ್ತ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಜಮೀನಿನಲ್ಲಿ ಮಳೆಯ ನೀರು ನಿಂತು ಬೆಳೆ ಹಾನಿಯಾಗಿದೆ. ಹನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಸಾಕಷ್ಟು ಮಳೆ ಬಿದ್ದಿದೆ.

ನೂರಾರು ಮಂದಿ ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಿದ್ದರು. ಒಂದೇ ಮಳೆಗೆ ಜಮೀನುಗಳಲ್ಲಿ ಕೆರೆ ಸೃಷ್ಟಿಸಿದ ಮಳೆಯು ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ತಂಬಾಕು ಸಸಿಯನ್ನು ಹೊತ್ತೊಯ್ದಿದೆ. ಅಲ್ಲಲ್ಲಿ ಶುಂಠಿ ಬೆಳೆಗೂ ಹಾನಿ ಮಾಡಿದೆ. ಶುಂಠಿ ಕೃಷಿಗಾಗಿ ಅಳವಡಿಸಿದ್ದ ತುಂತುರು ನೀರಾವರಿಯ ಪರಿಕರಗಳು ಹಾನಿಯಾಗಿವೆ. ಮುತ್ತುರಾಯನ ಹೊಸಹಳ್ಳಿಯ ರಾಜೇಗೌಡ, ಸಣ್ಣೇಗೌಡ, ರಾಮಚಂದ್ರ, ಬೋರೇಗೌಡ, ಅಶೋಕ, ಲೋಹಿತ್‌ಗೌಡ, ರಾಜಶೇಖರ್, ಶಿವರಾಜೇಗೌಡ, ಅಣ್ಣಾಜಿಗೌಡ ಸೇರಿದಂತೆ ಇತರ ರೈತರ ತಂಬಾಕು, ಶುಂಠಿ ಬೆಳೆ ಹಾನಿಯಾಗಿದೆ.

ಕಲ್ಲಹಳ್ಳಿಯ ಬೈಕಟ್ಟೆ, ದೊಡ್ಡಕೆರೆ, ಆಡಿಗನಹಳ್ಳಿಕೆರೆ, ತಾಳೆ ಮಂಡಿಕಟ್ಟೆ, ಹುಣಸೇಗಾಲದ ಕೆರೆ, ಹರೀನಹಳ್ಳಿ, ಕರ್ಣಕುಪ್ಪೆ, ವದ್ಲಿಮನುಗನಹಳ್ಳಿ ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ. ದೊಡ್ಡ ಕೆರೆಗಳಿಗೂ ಸಾಕಷ್ಟು ನೀರು ಹರಿದು ಬಂದಿದೆ. ಮುತ್ತುರಾಯನಹೊಸಹಳ್ಳಿಯ ಸೀತಮ್ಮಮಾದಯ್ಯರ ತೋಟದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದು ಕಟ್ಟೆಯನ್ನೇ ಒಡೆದು ಹಾಕಿದೆ. ಅಲ್ಲದೆ ತೆಂಗು, ಅಡಕೆ ಸಸಿಗಳಿಗೆ ಇತ್ತೀಚೆಗೆ ಹಾಕಿದ್ದ ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಮಳೆ ನೀರು ಹೊತ್ತೊಯ್ದಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net