ಹೈ ವೋಲ್ಟೇಜ್​ನಿಂದ ಅನಾಹುತ, ವಿದ್ಯುತ್ ಪರಿಕರಕ್ಕೆ ಹಾನಿ

H22 High Voltage 2
Published on

ಹುಬ್ಬಳ್ಳಿ: ಏಕಾಏಕಿ ಹೈ ವೋಲ್ಟೇಜ್​ನಿಂದ ಉಂಟಾದ ಶಾರ್ಟ್ ಸರ್ಕ್ಯೂಟ್​ನಿಂದಾಗಿ 20ಕ್ಕೂ ಹೆಚ್ಚು ಮನೆಗಳ ಇಲೆಕ್ಟ್ರಾನಿಕ್ ಮತ್ತು ಇಲೆಕ್ಟ್ರಿಕಲ್ ಉಪಕರಣಗಳು ಹಾನಿಗೀಡಾದ ಘಟನೆ ಹೊಸೂರಿನ ಸಿದ್ದಲಿಂಗೇಶ್ವರ ಕಾಲನಿಯಲ್ಲಿ ಮಂಗಳವಾರ ಸಂಭವಿಸಿದೆ.
ಮಧ್ಯಾಹ್ನ ಹೈ ವೋಲ್ಟೇಜ್​ನಿಂದ ಹಲವು ಮನೆಗಳ ಟಿವಿ, ಕಂಪ್ಯೂಟರ್, ಫ್ರಿಜ್, ವಾಷಿಂಗ್ ಮಶಿನ್​ಗಳು ಹಾನಿಗೀಡಾಗಿವೆ. ಕೆಲ ಪರಿಕರಗಳ ವೈರ್​ಗಳೂ ಸುಟ್ಟು ಕರಕಲಾಗಿವೆ. ಆತಂಕಕ್ಕೀಡಾದ ಸಾರ್ವಜನಿಕರು ಕೂಡಲೆ ಹೆಸ್ಕಾಂ ಅಧಿಕಾರಿಗಳು ಹಾಗೂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ಹಾನಿ ಪರಿಶೀಲಿಸಿದರು. ಆದರೆ, ಪರಿಹಾರದ ಕುರಿತು ಚಕಾರ ಎತ್ತದೇ ವಾಪಸಾಗಿದ್ದಾರೆ ಎಂದು ಸ್ಥಳೀಯರಾದ ಆನಂದ ದಲಬಂಜನ ದೂರಿದ್ದಾರೆ. ಆಗಿರುವ ಹಾನಿಗೆ ಪರಿಹಾರ ಕೊಡಿಸಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸ್ಥಳೀಯ ಯುವಕರು ಗಾಳಿಪಟ ಹಾರಿಸುವಾಗ ಎರಡು ವೈರ್​ಗಳ ಮಧ್ಯೆ ಘರ್ಷಣೆ ಉಂಟಾಗಿದ್ದರಿಂದ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಕುರಿತು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ(ಎಇಇ)ಗೆ ವರದಿ ನೀಡಲು ಸೂಚಿಸಿದ್ದೇನೆ.| ಕೃಷ್ಣಪ್ಪ ಕಾರ್ಯನಿರ್ವಾಹಕ ಇಂಜಿನಿಯರ್, ಹೆಸ್ಕಾಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net