ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು

dam
Published on

ವೇಣುವಿನೋದ್ ಕೆ.ಎಸ್. ಮಂಗಳೂರು

ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಸಣ್ಣ ನೀರಾವರಿ ಇಲಾಖೆ ಮುಂದಡಿ ಇಟ್ಟಿದೆ.

ಈಗಾಗಲೇ ಇದಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಟ್ಟು 3986.25 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ಇದು.

‘ಇಂತಹ ಯೋಜನೆಯನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಸಹಿಸಲು ಸಾಧ್ಯವಿಲ್ಲ. ಇದರಿಂದ ದುಷ್ಪರಿಣಾಮ ಉಂಟಾಗುತ್ತದೆ. ಅರಣ್ಯ ಭೂಮಿ ಮುಳುಗಡೆಯಾಗಲಿದೆ’ ಎಂದು ಯೋಜನೆ ವಿರುದ್ಧ ಪರಿಸರವಾದಿಗಳು ಗರಂ ಆಗಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆಯವರು, ಯೋಜನೆಯಿಂದ ಯಾವುದೇ ಹಾನಿಯಾಗದು; ಅಲ್ಲದೆ ಪಶ್ಚಿಮ ಘಟ್ಟ ಪ್ರದೇಶದಲ್ಲೋ ಅಥವಾ ಅದರ ತಪ್ಪಲಿನಲ್ಲೋ ಇದನ್ನು ಮಾಡುತ್ತಿಲ್ಲ. ಬದಲಾಗಿ ಬಯಲು ಪ್ರದೇಶದಲ್ಲಿ ಮಾತ್ರವೇ ಯೋಜನೆ ಕೈಗೊಳ್ಳಲಾಗುವುದು ಎನ್ನುತ್ತಾರೆ.

ಯಾರಿಗೂ ಹಾನಿಯಾಗುವ ಪ್ರಶ್ನೆ ಬರುವುದಿಲ್ಲ. ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ಉದ್ದೇಶಗಳಿಗಾಗಿ ಶಾಸಕರಿಂದಲೇ ಮಾಹಿತಿ, ಅಲ್ಲದೆ ಜನರಿಂದಲೂ ಅಭಿಪ್ರಾಯ ಪಡೆದುಕೊಂಡು ಯೋಜನಾ ವರದಿ ತಯಾರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

 ಉಪನದಿಗಳಿಗೆ ಗಮನ: ಪ್ರಮುಖ ನದಿಗಳಿಗೆ ಪಶ್ಚಿಮ ಘಟ್ಟದಿಂದ ಬರುವ ಉಪನದಿಗಳು ಸಾಕಷ್ಟಿವೆ. ಅಂತಹವುಗಳ ಮೇಲೆ ಗಮನ ಕೊಡಲಾಗಿದೆ. ದೊಡ್ಡ ನದಿಗಳಲ್ಲಿ ಈಗಾಗಲೇ ಕೆಲವು ಅಣೆಕಟ್ಟುಗಳಿವೆ. ಹಾಗಾಗಿ ಉಪನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗುವುದು. ಬಹುತೇಕ ಅಣೆಕಟ್ಟುಗಳು ಬ್ರಿಜ್ ಕಂ ಬ್ಯಾರೇಜ್ ರೂಪದಲ್ಲಿರುತ್ತವೆ. ಇದರಿಂದ ಜನರಿಗೆ ಸಂಪರ್ಕಕ್ಕೂ ನೆರವಾಗಲಿವೆ.

ಜಮೀನು ಮುಳುಗಡೆಯಾಗದು: ಸಣ್ಣ ನೀರಾವರಿ ಇಲಾಖೆಯಿಂದ ನಾವು ನಿರ್ಮಿಸುವ ಹೆಚ್ಚಿನ ಡ್ಯಾಂಗಳು 6 ಅಡಿ ಮೀರುವುದಿಲ್ಲ. ಹಾಗಾಗಿ ನದಿಗಳ ಇಕ್ಕೆಲದಲ್ಲಿ ಸ್ವಾಭಾವಿಕ ಎತ್ತರದಲ್ಲೇ ನೀರು ನಿಲ್ಲಲಿದೆ. ಒಂದು ವೇಳೆ ಅದರ ಹಿನ್ನೀರಿನಲ್ಲಿ ಎಲ್ಲಾದರೂ ಜಮೀನಿಗೆ ನೀರು ಹರಿಯುವ ಸಾಧ್ಯತೆ ಕಂಡಲ್ಲಿ, ಅಲ್ಲಿ ಮಣ್ಣಿನ ಗೋಡೆ ನಿರ್ಮಿಸಿ ಕೊಡುವುದಕ್ಕೂ ಅವಕಾಶಗಳಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಅಣೆಕಟ್ಟು?: ಮಾಸ್ಟರ್ ಪ್ಲಾನ್‌ನಲ್ಲಿ ದ.ಕ. ಜಿಲ್ಲೆಗೆ 446, ಉಡುಪಿ 424, ಕೊಡಗು 12 ಹಾಗೂ ಉತ್ತರ ಕನ್ನಡ ಜಿಲ್ಲೆಗೆ 466 ಕಿಂಡಿ ಅಣೆಕಟ್ಟು ನಿರ್ಮಿಸಲು ಪ್ರಸ್ತಾವಿಸಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿದ್ದು, ಈ ಸಾಲಿನ ಬಜೆಟ್‌ನಲ್ಲಿ 500 ಕೋಟಿ (ದ.ಕ. 219.20, ಉಡುಪಿ 140.80, ಕೊಡಗು 40, ಉತ್ತರ ಕನ್ನಡ 100 ಕೋಟಿ) ರೂ. ಬಿಡುಗಡೆಯಾಗಿದೆ. ಈಗಾಗಲೇ ಪ್ರಸ್ತಾವನೆ ಸಿದ್ಧಗೊಂಡರೂ, ಮುಂದಿನ ಕ್ರಮವಾಗಿ ಎನ್‌ಐಟಿಕೆ ತಜ್ಞರ ತಂಡ ನದಿ ಸಮೀಕ್ಷೆ ಕೈಗೊಳ್ಳಲಿದೆ. ಯಾವುದೇ ನದಿಯ ಯೋಜನೆ ಅವೈಜ್ಞಾನಿಕವಿದ್ದರೆ ಅದರಲ್ಲಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಐದು ವರ್ಷಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತದೆ. ಇವುಗಳೆಲ್ಲವೂ ಕಿಂಡಿ ಅಣೆಕಟ್ಟುಗಳಾಗಿವೆ. ಅಲ್ಲದೆ ಪಶ್ಚಿಮ ಘಟ್ಟದಲ್ಲಿ ನಿರ್ಮಾಣ ಮಾಡುತ್ತಿಲ್ಲ. ಹಾಗಾಗಿ ಸಮಸ್ಯೆಯಾಗುವುದಿಲ್ಲ.

ಗೋಕುಲ್‌ದಾಸ್, ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ದಕ್ಷಿಣ ಕನ್ನಡ

ಎತ್ತಿನಹೊಳೆ ಹೆಸರಲ್ಲಿ ಹಣ ಲೂಟಿ ಹೊಡೆದಾಯ್ತು, ಈಗ ಪಶ್ಚಿಮ ಘಟ್ಟಕ್ಕೇ ಕನ್ನ ಹಾಕುವ ಯೋಜನೆ ಇದು. ಇದರಿಂದ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟಗಳ ಮೇಲೆ ಹೊಡೆತ ನಿಶ್ಚಿತ

ಶಶಿಧರ ಶೆಟ್ಟಿ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net