ಮುಷ್ಟೂರು ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ

31mnv01
Published on

ಮಾನ್ವಿ: ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಮುಷ್ಟೂರು ಹಳ್ಳದ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಯನ್ನು ಸಣ್ಣ ನೀರಾವರಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸೋಮವಾರ ಪರಿಶೀಲಿಸಿದರು.

ಶಾಶ್ವತ ಸೇತುವೆ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದೆ. 72 ಲಕ್ಷ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗುವವರೆಗೂ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಜಿಪಂ ಸಿಇಒಗೆ ಸೂಚಿಸಿದ್ದು, ಹಣ ಬಿಡುಗಡೆಗಾಗಿ ಸಿಎಂ ಗಮನಕ್ಕೆ ತರುವುದಾಗಿ ಬೋಸರಾಜು ಹೇಳಿದರು.
ಮೂಷ್ಟೂರು ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕರೆತಂದು ಅಂದಾಜು ಪ್ರತಿ ಸಿದ್ಧಪಡಿಸಲು ತಿಳಿಸಿರುವೆ. ಅಂದಾಜು ಪ್ರತಿ ಸಿದ್ಧವಾದ ಬಳಿಕ ಸಿಎಂ ಗಮನಕ್ಕೆ ತರಲಾಗುವುದು. ಅಲ್ಲಿವರೆಗೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಬೋಸರಾಜು ತಿಳಿಸಿದರು.

ಶಾಸಕ ಹಂಪಯ್ಯ ನಾಯಕ ಮಾತನಾಡಿ, ಪ್ರತಿ ವರ್ಷ ಹಳ್ಳದ ಸೇತುವೆ ಕೊಚ್ಚಿಕೊಂಡು ಹೋಗಿ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸಬೇಕಾಗಿದ್ದು, ಕೂಡಲೇ ಕಾಯಂ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಸಣ್ಣ ನೀರಾವರಿ ಇಲಾಖೆ ಸಿಇ ಪ್ರಕಾಶ ಶ್ರೀಹರಿ, ಎಇಇ ಈಶ್ವರ, ಲೋಕೋಪಯೋಗಿ ಇಲಾಖೆ ಎಇಇ ರಾಜಕುಮಾರ, ಜೆಇ ಮನ್ಸೂರ್, ಎಇ ಸಂತೋಷಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಪೂರ್ ಸಾಬ್, ಪ್ರಮುಖರಾದ ಬಿ.ಕೆ.ಅಮರೇಶಪ್ಪ, ದೊಡ್ಡ ಬಸಪ್ಪಗೌಡ, ಬಾಲಸ್ವಾಮಿ ಕೊಡ್ಲಿ, ಸಣ್ಣ ಬಸನಗೌಡ ಬ್ಯಾಗವಾಟ, ರಾಜಾ ವಸಂತ ನಾಯಕ, ಖಾಲೀದ್ ಖಾದ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net