

ಪುರುಷೋತ್ತಮ ಪೆರ್ಲ ಕಾಸರಗೋಡು
ಬೇಸಿಗೆ ಬೇಗೆಯಿಂದ ನೀರಿಗೆ ಬರಗಾಲವಿರುವುದರ ನಡುವೆ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಕಾಟುಕುಕ್ಕೆ ಮುಂಗ್ಲಿಕಾನದ ತೋಡಿಗೆ ಅಡ್ಡ ನಿರ್ಮಿಸಿರುವ ವಿಸಿಬಿ ಕಮ್ ಟ್ರಾೃಕ್ಟರ್ ವೇಯಿಂದ ನೀರಿನ ಸಂರಕ್ಷಣೆ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದು, ಸ್ಥಳೀಯ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪಾಣಾಜೆ ಸಮೀಪದ ಕೊಂದಲಕಾನದಿಂದ ಹರಿದುಬಂದು ಅಡ್ಕಸ್ಥಳ ಸೀರೆ ಹೊಳೆಗೆ ನೀರು ಸೇರುತ್ತಿದ್ದು, ಕಾಟುಕುಕ್ಕೆಯ ಮುಂಗ್ಲಿಕಾನವಾಗಿ ನೀರು ಹರಿಯುತ್ತಿದೆ. ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ವಿಸಿಬಿ ಕೃಷಿಕರೇ ಸ್ವತಃ ಇದನ್ನು ನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಪ್ರಯೋಜನ ಲಭಿಸುವಂತಾಗಿದೆ.
ಕೃಷಿಕರು ತಮ್ಮ ಸ್ವಂತ ಖರ್ಚಿನಲ್ಲೇ ಇದೇ ತೋಡಿಗೆ ಕಟ್ಟಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಕಟ್ಟ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ ಎಂಬುದು ಇಲ್ಲಿನ ಕೃಷಿಕರ ಅಸಮಾಧಾನ. ಅಡ್ಕಸ್ಥಳ ಹೊಳೆಗೆ ಬೃಹತ್ ಅಣೆಕಟ್ಟು ನಿರ್ಮಾಣಗೊಂಡಿರುವುದರಿಂದ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಆದರೆ ಅಡ್ಕಸ್ಥಳ ಅಣೆಕಟ್ಟಿನಿಂದ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ, ಬಜಕೂಡ್ಲು ಸಾಯಿ ಟ್ರಸ್ಟ್ ನಿರ್ಮಿಸಿರುವ ವಸತಿ ಸಮುಚ್ಚಯ ಸಹಿತ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ನೀರು ಪಂಪಿಂಗ್ ನಡೆಸುತ್ತಿರುವುದರಿಂದ ಬೇಸಿಗೆಯಲ್ಲಿ ಅಂತರ್ಜಲ ಬರಿದಾಗುವ ಭೀತಿಯೂ ಕೃಷಿಕರನ್ನು ಕಾಡುತ್ತಿದೆ.
ನೀರಿನ ಸಂಗ್ರಹಕ್ಕೆ ತಡೆಗೋಡೆ
2021ರಲ್ಲಿ ವಿಸಿಬಿ ಕಮ್ ಟ್ರಾೃಕ್ಟರ್ ವೇಯನ್ನು ಕಿರು ನೀರಾವರಿ ಇಲಾಖೆ 53 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಈ ಹಿಂದೆ ಮರದ ಹಲಗೆಗಳನ್ನು ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸುತ್ತಿದ್ದು, ಪ್ರಸ್ತುತ ಫೈಬರ್ ಹಲಗೆಗಳಿಗೆ ಬದಲಾಯಿಸಲಾಗಿದೆ. 15 ಅಡಿ ಆಳಕ್ಕೆ ನೀರು ಸಂಗ್ರಹ ಸಾಮರ್ಥ್ಯವಿದ್ದು, ಹೆಚ್ಚು ನೀರು ದಾಸ್ತಾನಿಗೆ ಸಹಕಾರಿಯಾಗುವಂತೆ ತೋಡಿನ ಅಂಚಿಗೆ ಸುಸಜ್ಜಿತ ತಡೆಗೋಡೆ ನಿರ್ಮಿಸಲಾಗಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಈ ಫೈಬರ್ ಹಲಗೆ ಹೊರತೆಗೆದು ಸಂರಕ್ಷಿಸಿಡಲು ಸುಸಜ್ಜಿತ ಕೊಠಡಿ ನಿರ್ಮಿಸಲಾಗಿದೆ.
ಮುಂಗ್ಲಿಕಾನಕ್ಕೆ ಜಲ ಸಂಪತ್ತು
ಜಲಸಂರಕ್ಷಣೆಗೆ ಸರ್ಕಾರ ವಿವಿಧ ಯೋಜನೆ ಜಾರಿಗೊಳಿಸುತ್ತಿದ್ದರೂ, ಇವುಗಳಲ್ಲಿ ಬಹುತೇಕ ಯೋಜನೆ ನಿಷ್ಪ್ರಯೋಜಕವಾಗುತ್ತಿದ್ದು, ಈ ನಡುವೆ ಮುಂಗ್ಲಿಕಾನದ ವಿಸಿಬಿ ಕಮ್ ಟ್ರಾೃಕ್ಟರ್ ವೇ ಕೃಷಿಕರ ಪಾಲಿಗೆ ವರದಾನವಾಗುತ್ತಿದೆ. ವಿಸಿಬಿ ಮೂಲಕ ಕಿರು ಸೇತುವೆ ನಿರ್ಮಾಣಗೊಂಡಿರುವುದರಿಂದ ಎರಡು ಗ್ರಾಮಗಳಿಗೆ ಸಂಪರ್ಕ ಲಭ್ಯವಾಗಿದೆ. ಮುಂಗ್ಲಿಕಾನದಿಂದ ಒಡ್ಯ ಹಾದಿಯಾಗಿ ಪುತ್ತೂರಿಗೆ ತೆರಳಲು ಸನಿಹದ ದಾರಿಯಾಗಿದೆ.
ಮುಂಗ್ಲಿಕಾನ ಕಿರು ಅಣೆಕಟ್ಟು ಸ್ಥಳೀಯ ಕೃಷಿಕರಿಗೆ ಎರಡು ರೀತಿಯಲ್ಲಿ ಪ್ರಯೋಜನವಾಗುತ್ತಿದೆ. ಟ್ರ್ಯಾಕ್ಟರ್ ವೇ ನಿರ್ಮಾಣಗೊಂಡಿರುವುದರಿಂದ ವಾಹನಗಳ ಸಂಚಾರದೊಂದಿಗೆ ಎರಡು ಗ್ರಾಮಗಳ ಸಂಪರ್ಕಕ್ಕೆ ಸಹಕಾರಿಯಾಗಿದೆ. ಫೈಬರ್ ಹಲಗೆ ಅಳವಡಿಸುತ್ತಿರುವುದರಿಂದ ನೀರಿನ ಸೋರಿಕೆ ಕಡಿಮೆಯಾಗಿ ದೀರ್ಘ ಕಾಲ ನೀರು ದಾಸ್ತಾನುಗೊಳ್ಳುತ್ತಿದೆ. ವಿಷ್ಣು ಭಟ್ ಮುಂಗ್ಲಿಕಾನ ಕೃಷಿಕ