ಎಸ್‌ಸಿಎಸ್‌ಜಿ, ಟಿಎಸ್‌ಪಿ ಯೋಜನೆ ದುರ್ಬಳಕೆಗೆ ಆಕ್ರೋಶ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

Dalitha Sangharsh Committee protest Mandya
Published on

ಮಂಡ್ಯ: ಎಸ್‌ಸಿಎಸ್‌ಜಿ/ಟಿಎಸ್‌ಪಿ ಯೋಜನೆಯ ಹಣದ ದುರ್ಬಳಕೆ ವಿರೋಧಿಸಿ, ಗ್ಯಾರಂಟಿ ಯೋಜನೆ ಅಥವಾ ಅನ್ಯ ಉದ್ದೇಶಗಳಿಗೆ ಬಳಸಿಕೊಂಡ ಎಸ್‌ಸಿಪಿ/ಟಿಎಸ್‌ಪಿ ಹಣ ಹಿಂದಿರುಗಿಸಲು ಆಗ್ರಹಿಸಿ ಕಾಯ್ದೆ 7ಸಿ ರದ್ದುಪಡಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ ರಾಜ್ಯ ಸರಾಸರಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳು ಎಂದು ವ್ಯಾಖ್ಯಾನಿಸುತ್ತದೆ. ಸಾರಾಂಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಅಂತರ ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಆದರೆ ಇದನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

2023-24ನೇ ಸಾಲಿನಲ್ಲಿ ಸುಮಾರು 25 ಸಾವಿರ ಕೋಟಿ ರೂ ಗ್ಯಾರಂಟಿ ಯೋಜನೆಗೆ 15 ಸಾವಿರ ಕೋಟಿ ರೂಗಳನ್ನು ಅನ್ಯ ಉದ್ದೇಶಕ್ಕೂ ಬಳಸಿರುವುದು ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲದೆ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರ ಕೂಡ ಮಾಡಿದಂತಾಗಿದೆ. ಮಾತ್ರವಲ್ಲದೆ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಇತರೆ ಮಂತ್ರಿಗಳೂ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ, ಕನ್ನಡಿಗರೆಲ್ಲರಿಗೂ ಈ ಯೋಜನೆಯಿಂದ ಅನುಕೂಲವಾಗಿದೆ. ಆದರೆ ಗ್ಯಾರಂಟಿ ಉದ್ದೇಶವೇ ಬೇರೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಉದ್ದೇಶವೇ ಬೇರೆಯಾಗಿದೆ. ಗ್ಯಾರಂಟಿಗಳು ದಲಿತರು ಮತ್ತು ದಲಿತೇರರ ನಡುವಿನ ಸಾಮಾಜಿಕ, ಆರ್ಥಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದಿಲ್ಲ. ಆದ್ದರಿಂದ ಈಗಿಂದೀಗಲೇ ಗ್ಯಾರಂಟಿಗಳಿಗೆ ಬಳಸಿರುವ ಎಸ್‌ಸಿಎಸ್‌ಪಿ/ಟಿಎಸ್ಪಿ ಹಣವನ್ನು ದಲಿತರ ಅಭಿವೃದ್ದಿಗೆ ಹಿಂದಿರುಗಿಸಬೇಕು. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ 7ಡಿ ಸೆಕ್ಷನ್ ರದ್ದುಪಡಿಸುಂತೆ 7ಸಿ ರದ್ದುಪಡಿಸಬೇಕು. ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕು. ಇಲ್ಲದಿದ್ದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪ್ರೊ.ಹುಲ್ಕೆರೆ ಮಹದೇವು, ಎಚ್.ಪಿ.ಸೋಮಶೇಖರ್, ಸಿದ್ದರಾಜು, ರಾಜಶೇಖರ, ಗುಡಿಗೇನಹಳ್ಳಿ ಚಂದ್ರಶೇಖರ್, ವಿಜಯಕುಮಾರ್, ಗಂಜಾಂ ಚಂದ್ರು, ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net