

ಉಡುಪಿ: ದಲಿತ ಚಳುವಳಿ ಆತ್ಮವಾಗಿದ್ದು, ಆಳುವ ವರ್ಗದ ಪಿತೂರಿಗಳಿಗೆ, ನಾಯಕರ ಸ್ವಾರ್ಥಕ್ಕೆ ದಲಿತ ಚಳುವಳಿ ವಿಘಟನೆಗೊಂಡಿರುವುದು ನೋವಿನ ಸಂಗಾತಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಭಾನುವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾಘಟಕ ಆಯೋಜಿಸಿದ ದಲಿತ ಚಳುವಳಿ ಪಿತಾಮಹ ಪ್ರೊ. ಬಿ.ಕೃಷ್ಣಪ್ಪರವರ 88ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಈ ಕಾಲಘಟ್ಟದಲ್ಲಿ ದಲಿತ ಚಳುವಳಿಗೆ ದೇಹವೂ ಇಲ್ಲ, ಬಾಯಿಯೂ ಇಲ್ಲ, ಉರಿಯುವ ಪಂಜಿನಂಥ ಕಾರ್ಯಕರ್ತರೂ ಇಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಮಾತನಾಡಿ, ಶೋಷಿತರ ಕಣ್ಮಣಿಯಾಗಿದ್ದ ಪ್ರೊ. ಬಿ.ಕೆ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಪ್ರಜ್ಞಾವಂತಿಕೆಯನ್ನು ಬೆಳಿಸಿದವರು. ಮಾತನಾಡಲು ಅಂಜುವ ಜನರಲ್ಲಿ ಗರ್ಜಿಸುವ ದೈರ್ಯವನ್ನು ತಂದವರು. ಇವರಿಂದಾಗಿ ದಲಿತರ ಮನೆಗಳಲ್ಲಿ ಇಂದು ಅಂಬೇಡ್ಕರ್ ಪೋಟೋಗಳನ್ನು ಕಾಣತೊಡಗಿದೆ ಎಂದರು.
ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ ಮಾತನಾಡಿದರು. ದಲಿತ ಮುಖಂಡರಾದ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಸತೀಶ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಗುಣವಂತ ತೊಟ್ಟಂ, ವಿನಯ ಬಲರಾಮನಗರ, ಈಶ್ವರ್ ಗದಗ್, ಯೋಗೀಶ್ ಮಲ್ಪೆ, ಅಚ್ಚುತ್ತ ಕದ್ಕೆ, ವಿಶ್ವನಾಥ ಕದ್ಕೆ, ಶಶಿಕಲಾ ತೊಟ್ಟಂ, ಸಂಕಿ ತೊಟ್ಟಂ, ಕಲಾವತಿ ತೊಟ್ಟಂ, ಅರ್ಚನ ಮುಂತಾದವರು ಉಪಸ್ಥಿತರಿದ್ದರು. ಸುಕೇಶ್ ಪುತ್ತೂರು ಸ್ವಾಗತಿಸಿ, ನವೀನ್ ಬನ್ನಂಜೆ ವಂದಿಸಿದರು.