

ಅರಕೇರಾ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಾಜಿ ಉಪ ಪ್ರಧಾನಿ ಡಾ.ಜಗಜೀವನ್ ರಾಮ್ ಅವರು ದೇಶದ ಎರಡು ಕಣ್ಣುಗಳು ಇದ್ದಂತೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಉಪ ಪ್ರಧಾನಿ ಡಾ.ಜಗಜೀವನ್ ರಾಮ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಇಬ್ಬರು ನಾಯಕರು ಅತ್ಯಂತ ಕಟ್ಟಕಡೆಯ, ಅಸ್ಪಷ್ಯತೆಯ ಜನಾಂಗದಲ್ಲಿ ಜನಿಸಿದ ದಲಿತರ ದೃವತಾರೆಗಳಾಗಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ಕಟ್ಟ ಕಡೆಯ ವ್ಯಕ್ತಿಗೆ ಈ ವೇದಿಕೆಯಲ್ಲಿ ಕೂರಲು ಅವಕಾಶ ಸಿಗುತ್ತಿರಲಿಲ್ಲ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ ಮಾತನಾಡಿ, ಅಂಬೇಡ್ಕರ್ ಅವರ ಶಿಕ್ಷಣ, ಬದುಕು, ಹೋರಾಟ ಮೂರು ಮಂತ್ರಗಳನ್ನು ಯಾವತ್ತಿಗೂ ಮರೆಯಬಾರದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಸಂವಿಧಾನದಿಂದ ಸಾಧ್ಯ. ಮನೋವಾದಿಗಳು ಸಂವಿಧಾನವನ್ನು ತಿರುಚಲು ಪ್ರಯತ್ನ ನಡೆಸಿದ್ದಾರೆ. ಮನುಕುಲ ಇರುವವರೆಗೆ ಯಾರಿಂದಲೂ ಸಂವಿಧಾನಕ್ಕೆ ಕೈ ಹಾಕಲು ಸಾಧ್ಯವಿಲ್ಲ ಎಂದರು.
ಹಿರಿಯ ಸಾಹಿತಿ ಅಮರೇಶ ಬಲ್ಲಿದವ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಬದುಕು ಕೊಟ್ಟರೆ, ಡಾ.ಬಾಬು ಜಗಜೀವನ್ ರಾಮ್ ಅವರು ದೇಶದಲ್ಲಿ ಆರ್ಥಿಕ ಕೊರತೆ ಎದುರಾದಾಗ ಹಸಿರು ಕ್ರಾಂತಿಯನ್ನು ಮಾಡಿದ್ದಾರೆ. ಕೂಲಿ ಆಸೆಗೆ ಮಕ್ಕಳನ್ನು ಕೆಲಸಕ್ಕೆ ಕಳಿಸದಿರಿ ಎಂದರು.
ಇದಕ್ಕೂ ಮುನ್ನ ಪ್ರಮುಖ ಬೀದಿಗಳಲ್ಲಿ ಮಹನೀಯರ ಭಾವಚಿತ್ರವನ್ನು ತೆರದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕುಂಭ, ಕಳಸ ಹಿಡಿದು ಮೆರಗು ತಂದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಶಿವರಾಯ ಅಕ್ಕರಕಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಅರಿಕೇರಿ ಸುರೇಶ ಬಾಬು ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಎಸ್‌ಟಿ) ಬಸವರಾಜ ಪೂಜಾರಿ, ಕೆಡಿಪಿ ಸದಸ್ಯ ಶಿವಪ್ಪ ಪಲಕನಮರಡಿ, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪೂರಿ, ಪ್ರಮುಖರಾದ ಕೆ.ಭಗವಂತರಾಯ ನಾಯಕ, ಮಹಂತೇಶ ಪೂಜಾರಿ, ಹಮ್ಮು ಪೂಜಾರಿ, ರಾಮನಗೌಡ ಕ್ವಾಟೆ ದೊರೆ, ಸಿದ್ದಾರ್ಥ ಹವಾಲ್ದಾರ, ಶೇಖರಪ್ಪ ಗೌಡ ಮಾ.ಪಾ, ಯಲ್ಲಪ್ಪ ಆಲ್ದರ್ತಿ, ತನೋಜ ಕುಮಾರ, ರಂಗಪ್ಪ ಗಾಲಿ, ನಾಗರಾಜ ಜಂಬಲದಿನ್ನಿ ಇದ್ದರು.