ಪ್ರಾದೇಶಿಕ ಆಯುಕ್ತೆ ಎದುರು ತನ್ನ ಒಡಲಾಳದ ಹಿಂಜರಿಕೆ ಭಯ ಬಿಚ್ಚಿಟ್ಟ ದಲಿತ ಮಹಿಳೆ

Dalit woman reveals her fear of being a prostitute to the regional commissioner
Published on

ಬಾಗಲಕೋಟೆ:ಅಲ್ಲಿಗೆ ಹೋಗು ಅಂತೀರಿ, ಅಲ್ಲಿಗೆ ಹೋದಾಗ ನಮಗ ಏನಾದ್ರೂ ಆದ್ರ ಹೆಂಗ್ರೀ? ಅಲ್ಲಿ ದೇವ್ರು ಭಾಳ್​ ಬೆರಕಿ ಐತ್ರಿ. ನಮ್ಮ ಮಂದಿ ಅದ್ಕ ಅಲ್ಗೆ ಹೋಗಂಗಿಲ್ರಿ. ಹೋದ್ರ ನಮ್​ ಹುಡುಗ್ರು, ಮಕ್ಳಿಗೆ ಕಾಡಾಟ ಶುರು ಆಗೆತ್ರಿ.ಟಪ್ರಭಾ ನದಿ ಉಕ್ಕಿ ಮಿರ್ಜಿ ಗ್ರಾಮದಲ್ಲಿ ನೀರು ನುಗ್ಗಿದ್ದು ಅಲ್ಲಿನ ದಲಿತ ಕುಟುಂಬಕ್ಕೆ ಪಕ್ಕದ ಮಲ್ಲಾಪುರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಆಗು ಎಂದಾಗ ಆ ದಲಿತ ಮಹಿಳೆ ತನ್ನ ಮನದಲ್ಲಿನ ಆ ಅಸ್ಪಶ್ಯತೆ ಭೀತಿಯನ್ನು ಹೊರಹಾಕಿದ ಪ್ರಸಂಗ ಇದು.

ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹಾಗೂ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್​ ಮತ್ತು ಇತರೆ ಅಧಿಕಾರಿಗಳು ಶುಕ್ರವಾರ ಸಂಜೆ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿ ಮುಳುಗಡೆ ಜಾಗದಲ್ಲಿ ಸಂಕಷ್ಟ ಪಡುವುದಕ್ಕಿಂತ ಪಕ್ಕದ ಮಲ್ಲಾಪುರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾಗಿ ಎಂದು ದಲಿತ ಕುಟುಂಬಗಳಿಗೆ ತಿಳಿಸಿದಾಗ ಓರ್ವ ಮಹಿಳೆ ಅಲ್ಲಿಗೆ ಹೋಗಲು ನಾವು ಎಸ್ಟಿ ಮಂದಿ ಅದೇವ್ರಿ, ನಾವು ಅಲ್ಲಿಗೆ ಹೋದ್ರ ಆ ದೇವರು ನಮಗೆ ಕಾಟ ಕೊಡ್ತಾನ್ರೀ ಎಂದು ಮುಗ್ಧತೆಯಿಂದ ತನ್ನ ಆತಂಕವನ್ನು ಹೊರ ಹಾಕಿದರು.

ಪ್ರತಿ ವರ್ಷವೂ ಟಪ್ರಭಾ ನದಿ ಉಕ್ಕಿದಾಗೆಲ್ಲ ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿ ಅಲ್ಲಿನ ಜನರು ತೊಂದರೆ ಅನುಭವಿಸುತ್ತಾರೆ. ಅಲ್ಲಿನ 40ಕ್ಕೂ ಹೆಚ್ಚು ದಲಿತ ಕುಟುಂಬಗಳು ಸಹ ಪ್ರವಾಹದಿಂದ ನಲುಗುತ್ತಿವೆ.ಈ ಮೊದಲು ಬಾಗಲಕೋಟೆ ಜಿಲ್ಲಾಧಿಕಾರಿ ಆಗಿದ್ದ ಜಾನಕಿ ಕೆ.ಎಂ. ಸದ್ಯ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಆಗಿದ್ದಾರೆ. ಅವರಿಗೆ ಬಾಗಲಕೋಟೆ ಜಿಲ್ಲೆಯ ಕೃಷ್ಣ, ಟಪ್ರಭಾ ಮತ್ತು ಮಲಪ್ರಭಾ ನದಿ ಪ್ರವಾಹ ಸನ್ನಿವೇಶ ಹೊಸದಲ್ಲ. ಇದೀಗ ಟಪ್ರಭಾ ನದಿ ಉಕ್ಕಿದ್ದರಿಂದ ಅವರು ಪ್ರವಾಹ ಬಾಧಿತ ಮಿರ್ಜಿ ಗ್ರಾಮಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿದಾಗ ದಲಿತ ಮಹಿಳೆಯ ಆ ಹಿಂಜರಿಕೆ ಮಾತುಗಳಿಂದ ಏನು ಮಾಡಬೇಕು ಎನ್ನುವುದೇ ತಿಳಿದಂತಾಯಿತು.

ಹಾಗೆಂದು ಇಲ್ಲಿ ಯಾರೂ ಸಹ ದಲಿತರೆಂದು ಸ್ಥಳಾಂತರಕ್ಕೆ ವಿರೋಧ ಮಾಡಿದಂತೆ ಕಂಡು ಬರುವುದಿಲ್ಲ. ಆದರೆ, ಅಲ್ಲಿನ ಕೆಲವರು ತಾವೇ ಸ್ವಯಂ ಆಗಿ ಈ ಅಸ್ಪಶ್ಯತೆ ಬೇಲಿ ಹಾಕಿಕೊಂಡು ಅದಕ್ಕೆ ದೇವರ ಕಾಟ ಎನ್ನುವ ಮೂಢ ನಂಬಿಕೆಯಲ್ಲಿ ಬಳಲುತ್ತಿರುವುದನ್ನು ಆ ದಲಿತ ಮಹಿಳೆ ಹೊರ ಹಾಕಿದ್ದಾಳೆ.

ಅಧಿಕಾರಿಗಳು ಮತ್ತು ದಲಿತ ಮಹಿಳೆಯ ನಡುವಿನ ಸಂಭಾಷಣೆಯ ವಿಡಿಯೋ ಇದೀಗ ಎಲ್ಲ ಕಡೆಗೂ ಹರಿದಾಡುತ್ತಿದೆ. ವಿಡಿಯೋದಲ್ಲಿ ಆ ಮುಗ್ಧ ದಲಿತ ಮಹಿಳೆಯ ಮಾತಿಗೆ ಅಧಿಕಾರಿಗಳು ಏನು ಹೇಳಬೇಕು ಎಂದು ತೋಚದೇ ನಗೆಗಡಲಲ್ಲಿ ತೇಲುತ್ತಾರೆ. ಆದರೆ, ಎಷ್ಟೇ ಮನವರಿಕೆ ಮಾಡಲು ಮುಂದಾದರೂ ಸಹ ಆ ಮಹಿಳೆ ಮಾತ್ರ ದೇವರ ಭೀತಿಯಿಂದ ತಾನು ಪುನರ್​ ವಸತಿ ಕೇಂದ್ರಕ್ಕೆ ಸ್ಥಳಾಂತರ ಆಗಲ್ಲ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ.

ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹಾಗೂ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್​ ಮತ್ತು ಇತರೆ ಅಧಿಕಾರಿಗಳು ಶುಕ್ರವಾರ ಸಂಜೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಲಿತ ಮಹಿಳೆಯೊಂದಿಗೆ ಮಾತನಾಡುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net