

ವಿಜಯಪುರ : ರಾಜಸ್ಥಾನದ ಜಲೋರ್ ಜಿಲ್ಲೆ ಸುರಾನ ಗ್ರಾಮದಲ್ಲಿ ದಲಿತ ವಿದ್ಯಾರ್ಥಿ ಅವಮಾನವೀಯ ಹತ್ಯೆ ಖಂಡಿಸಿ ಕರ್ನಾಟಕ ಮಾದಿಗ ಜನ ಸಂಘ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಸಂಸ್ಥಾಪಕ ಪರಸರಾಮ ಎಸ್. ರೋಣಿಹಾಳ ಮಾತನಾಡಿ, ರಾಜಸ್ಥಾನದಲ್ಲಿ ಖಾಸಗಿ ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 9 ವರ್ಷದ ವಿದ್ಯಾರ್ಥಿಯನ್ನು ಶಾಲೆಯಲ್ಲಿನ ಕುಡಿಯುವ ನೀರಿನ ಮಡಕೆ ಮುಟ್ಟಿದಕ್ಕಾಗಿ ಶಿಕ್ಷಕ ಮಾರಣಾಂತಿಕ ಮೇಲೆ ಹಲ್ಲೆ ಮಾಡಿದ್ದು, ವಿದ್ಯಾರ್ಥಿಯ ಸಾವಿಗೂ ಕಾರಣರಾಗಿದ್ದಾನೆ. ಸಾವಿಗೆ ಕಾರಣರಾದ ಶಿಕ್ಷಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಬಾಲ್ಯದಲ್ಲಿ ಇದೇ ರೀತಿಯಾಗಿ ಅಪಮಾನಿಸಲಾಗಿತ್ತು. ಸ್ವಾತಂತ್ರ್ಯ ಅಮೃತಮಹೋತ್ಸವದ ಸಂಭ್ರಮದ ಗಳಿಗೆಯಲ್ಲಿ ಪರಿಶಿಷ್ಟ ಜಾತಿ ಬಾಲಕನನ್ನು ಅಮಾನುಷವಾಗಿ ತಳಿಸಲಾಗಿದೆ. ಕುಡಿಯುವ ನೀರಿನ ಮಡಕೆ ಮುಟ್ಟಿದಕ್ಕೆ ಬಾಲಕನನ್ನು ಹೊಡೆದು ಕೊಲೆ ಮಾಡಿದ್ದು ಪರಿಶಿಷ್ಟ ಸಮುದಾಯಕ್ಕೆ ನೋವು ತರಿಸಿದೆ ಎಂದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಸದಾನಂದ ಗುನ್ನಾಪುರ ಮಾತನಾಡಿ, ಮಕ್ಕಳು ಸ್ವತಂತ್ರ ಮತ್ತು ಆರೋಗ್ಯಯುತವಾಗಿ ಬದುಕುವಂತ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಆದರೆ ದೇಶದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜಕೀಯ ಪಕ್ಷಗಳು ಅದನ್ನು ಸಾಕಾರಗೊಳಿಸುವಲ್ಲಿ ವಿಲವಾಗಿವೆ. ಎಲ್ಲರೂ ಒಗ್ಗೂಡಿ ಇಂತಹ ಘಟನೆಗಳನ್ನು ಮರುಕಳಿಸಿದಂತೆ ಧ್ವನಿ ಎತ್ತಬೇಕಿದೆ ಎಂದು ಆಗ್ರಹಿಸಿದರು.
ದಲಿತ ಒಕ್ಕೂಟಗಳ ರಾಜ್ಯ ಅಧ್ಯಕ್ಷ ಸಾಯಿಕುಮಾರ ಬಿಸನಾಳ, ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ ಹೊಸುರ, ಸಂಘಟನಾ ಕಾರ್ಯದರ್ಶಿ ಸಂಪತ ಯಡಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ ಪೂಜಾರಿ, ವಿಠಲರಾಜ ಸಂದಿಮನಿ, ಅಂಬಣ್ಣ ಗುನ್ನಾಪುರ, ಕಿರಣ ಆಸಂಗಿ, ದುರಗಪ್ಪ ಚಿಕ್ಕೋಡಿ, ಶರಣಪ್ಪ ಬಸನಾಳ, ಭೀಮಶಿ ರೋಣಿಹಾಳ, ಸೋಮು ರಣದೇವಿ, ಲಾಯಪ್ಪ ಬಸನಾಳ, ಮಲ್ಲಿಕಾರ್ಜುನ ಗುನ್ನಾಪುರ ಮುಂತಾದವರು ಉಪಸ್ಥಿತರಿದ್ದರು.