ಬಡವರಿಗೆ ನಿವೇಶನ ಹಂಚಲು ಆಗ್ರಹ: ದಸಂಸ ನೇತೃತ್ವದಲ್ಲಿ ಹೋರಾಟ

Dalit Sangharsh Samiti protest Mandya
Published on

ಮಂಡ್ಯ: ತಾಲೂಕಿನ ಹಲ್ಲೆಗೆರೆ ಮೋಳೆ ಗ್ರಾಮ ಠಾಣೆ ಜಾಗ ಮತ್ತು ಸರ್ವೇ ನಂ 153ರ ಭೂಮಿಯಲ್ಲಿ ನಿವೇಶನರಹಿತ ಬಡ ಜನರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಧರಣಿ ನಡೆಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದ ಸಮಿತಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವು ಬಾರಿ ಚಳುವಳಿ ಮಾಡಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಚಳವಳಿಗೆ ಸ್ಪಂದಿಸಿದ ಜಿಲ್ಲಾಡಳಿತ ಗ್ರಾಮ ಠಾಣೆ ಜಾಗ ಮತ್ತು ಸರ್ವೇ ನಂ 153 ಕಿರೆಮಡಿ ಜಾಗವನ್ನು ಅಳತೆ ಮಾಡಿ ಗಡಿ ಗುರುತಿಸಿ ನಕ್ಷೆ ತಯಾರು ಮಾಡಿತು. ಆದರೆ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಿ ಬಡ ಜನರಿಗೆ ನಿವೇಶನ ನೀಡಬೇಕಾದ ಅಧಿಕಾರಿಗಳು ಭೂಗಳ್ಳರ ಪರವಾಗಿ ನಿಂತಿರುವ ಮತ್ತು ಭ್ರಷ್ಟಾಚಾರಕೆ ಒಳಗಾಗಿರುವಂತೆ ಅನುಮಾನ ಮೂಡಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಹಲ್ಲೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವೇಶನ ರಹಿತ ಜನರ ಅರ್ಜಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿರುವ ಬಗ್ಗೆ ಮಾಹಿತಿ ನೀಡಬೇಕು. ಆ ಅರ್ಜಿಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿರುವ ಬಗ್ಗೆ ವಿವರ ಕೊಡಬೇಕು. ಸರ್ವೇ ನಂ 153 ಕಿರೆ ಮಡಿ ಜಾಗವನ್ನು ಆಶ್ರಯ ಯೋಜನೆಯಡಿ ಭೂಮಿಯನ್ನು ಕಾಯ್ದಿರಿಸಿರುವ 2020ರಲ್ಲಿ ತಹಸೀಲ್ದಾರ್ ಅವರಿಂದ ಮಂಡ್ಯ ಎಸಿಗೆ ಕಡತ ಕಳುಹಿಸಲಾಗಿದ್ದು, ಈ ಕುರಿತು ಮುಂದುವರಿದು ಕ್ರಮ ಕೈಗೊಡಿರುವ ಕುರಿತು ತಿಳಿಸಬೇಕು. ಹಲ್ಲೆಗೆರೆ ಗ್ರಾಪಂನಲ್ಲಿ 2024 ಜ.26ರಂದು ನಡೆದ ಸಾಮಾನ್ಯ ಸಭೆ ನಿರ್ಣಯದಂತೆ ಹಲ್ಲೆಗೆರೆ ಮೋಳೆ ಗ್ರಾಮ ಠಾಣೆ ಜಾಗದಲ್ಲಿ ಅಶ್ರಯ ಯೋಜನೆಯಡಿ ಬಡ ಜನರಿಗೆ ನಿವೇಶನ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಗ್ರಾಮಸ್ಥರಾದ ಮಂಚಯ್ಯ, ಸೋಮಶಂಕರ್, ಜೋಗಯ್ಯ, ರಾಮ ಸಿಂಗಯ್ಯ, ಪುಟ್ಟಸ್ವಾಮಿ, ಚಿಕ್ಕಮರೀಗೌಡ, ವೈರಮುಡಿ, ದಾಸಯ್ಯ, ಸಿ.ಟಿ.ಕುಮಾರ, ಚಿಕ್ಕತಾಯಮ್ಮ, ಮೀನಾಕ್ಷಿ, ಕೃಷ್ಣಪ್ಪ, ನಿಂಗೇಗೌಡ, ಸ್ವಾಮಿ, ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net