ದಲಿತ ಸಂಘರ್ಷ ಸಮಿತಿ ಪ್ರತಿಭಟನೆ: ಡಿಡಿಪಿಐ ಶಿವರಾಮೇಗೌಡ ಅಮಾನತಿಗೆ ಆಗ್ರಹ

Dalit Sangharsh Samiti protest Mandya
Published on

ಮಂಡ್ಯ: ಮಳವಳ್ಳಿ ತಾಲೂಕು ಹಾಡ್ಲಿ- ಮೇಳಾಪುರ ವೃತ್ತದಲ್ಲಿನ ಅರುಣೋದಯ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯ ಶಿಕ್ಷಕರಿಗೆ ಪ್ರಥಮ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಶಿಕ್ಷಕರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು ಹಾಗೂ ಶಿಕ್ಷಕರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. ಶಿಕ್ಷಕರಿಗೆ ‘ಪ್ರಥಮ ವೇತನ ಪ್ರಮಾಣಪತ್ರ’ ಪಡೆಯಲು ಶಿಫಾರಸ್ಸು ಮಾಡದ ಡಿಡಿಪಿಐ ಶಿವರಾಮೇಗೌಡ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಶಿಕ್ಷಕರಿಗೆ ವೇತನ ಪಡೆಯಲು ಸಾಧ್ಯವಾಗದಂತೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿಗೆ ಸೇರಿದ ಮುಖ್ಯಶಿಕ್ಷಕ ರಮೇಶ್ ಹಾಗೂ ಸಹ ಶಿಕ್ಷಕಿ ಪಲ್ಲವಿ, ಸಾಮಾನ್ಯ ವರ್ಗಕ್ಕೆ ಸೇರಿದ ಶಿಕ್ಷಕರಾದ ಹೂವೆ ಮಹದೇವಿ ಹಾಗೂ ಮಮತಾ ಅವರು ಶಾಲೆಯಿಂದ ಸಾರಿಗೆ ಭತ್ಯೆಯ ವೇತನ ಪಡೆದು 170 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಎರಡು ವರ್ಷದ ಹಿಂದೆಯೇ ಶಾಲೆ ಅನುದಾನಿತಕ್ಕೆ ಒಳಪಟ್ಟಿದೆ. ಶಿಕ್ಷಕರಿಗೆ ‘ಪ್ರಥಮ ವೇತನ ಪ್ರಮಾಣಪತ್ರ’ ಪಡೆಯಲು ಜಿಪಂ ಸಿಇಒ ಅವರಿಗೆ ಶಿಫಾರಸ್ಸು ಮಾಡುವುದಕ್ಕೆ ಡಿಡಿಪಿಐ ಶಿವರಾಮೇಗೌಡ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಶಿಫಾರಸ್ಸು ಪತ್ರಕ್ಕೆ ಶಿಕ್ಷಕರಿಂದ ತಲಾ 5 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ನೀಡಿದ ಕಾರಣ ವೇತನ ಪಡೆಯದಂತೆ ಅನ್ಯಾಯವೆಸಗುತ್ತಿದ್ದಾರೆ. ಜಿಲ್ಲಾಡಳಿತ ಡಿಡಿಪಿಐ ಅಮಾನತುಗೊಳಿಸಿ ಪ್ರಥಮ ವೇತನ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ವಿಭಾಗೀಯ ಸಂಚಾಲಕ ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಆನಂದ್, ಜಿಲ್ಲಾಧ್ಯಕ್ಷೆ ಸುಶ್ಮಿತಾ, ರಂಗಸ್ವಾಮಿ, ಸುರೇಶ್, ಶರಾವತಿ, ಮುಖ್ಯಶಿಕ್ಷಕ ರಮೇಶ್, ಸಹ ಶಿಕ್ಷಕಿ ಪಲ್ಲವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net