

ಮಂಡ್ಯ: ಗ್ಯಾರೆಂಟಿ ಯೋಜನೆಗಳ ನೆಪದಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಲ್ಲಿ 13 ಸಾವಿರ ಕೋಟಿ ರೂಗಳನ್ನು ಬಳಕೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಮೂಲಕ ಪರಿಶಿಷ್ಟ ಜಾತಿ/ ಪಂಗಡಗಳ ಅಭಿವೃದ್ಧಿ ವಿರೋಧಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.
ರಾಜ್ಯವನ್ನಾಳಿದ ಎಲ್ಲ ಪಕ್ಷಗಳ ಸರ್ಕಾರ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳುತ್ತಿವೆ. ಇದರಿಂದ ಪರಿಶಿಷ್ಟ ಸಮುದಾಯಗಳು ಯಾವೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹಿಂದುಳಿದಿದೆ. 2013ರಲ್ಲಿ ದಲಿತರ ಅಭಿವೃದ್ದಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಪಯೋಜನೆ ಕಾಯ್ದೆ ನೆಪಮಾತ್ರಕ್ಕೆ ಜಾರಿ ಮಾಡಿತು. ಆದರೆ ಕಲಂ 7(ಸಿ) ಮತ್ತು 7(ಡಿ)ಗಳನ್ನು ಸೇರಿಸಿ ದಲಿತ ಸಮುದಾಯಕ್ಕೆ ಅನ್ಯಾಯ ಎಸಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ದಲಿತ ಸಮುದಾಯದ ಮಂತ್ರಿಗಳು ಮತ್ತು ಶಾಸಕರ ಸಹಮತದ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಅವರನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ. ಆರ್ಥಿಕ ಅಭಿವೃದ್ದಿಗೆ ವಿರೋಧಿಯಾಗಿರುವ ಅವರು ದಲಿತರ ಪಾಲಿನ ನಯವಂಚಕರಾಗಿದ್ದು, ದಲಿತ ನಾಯಕರು ಸಿದ್ದರಾಮಯ್ಯ ಬಾಲಂಗೋಚಿಯಂತೆ ವರ್ತಿಸುತ್ತಿದ್ದಾರೆ. ಎಸ್ಸಿ/ಎಸ್ಟಿ ಉಪಯೋಜನೆ ಕಾಯ್ದೆ ತಂದ ಹತ್ತು ವರ್ಷದಲ್ಲಿ 1 ಲಕ್ಷದ 50 ಸಾವಿರ ಕೋಟಿ ರೂ ಅನುದಾನವನ್ನು ಎಲ್ಲ ರಾಜಕೀಯ ಪಕ್ಷಗಳು 7(ಸಿ) ಮತ್ತು 7(ಡಿ) ಮೂಲಕ ಬಳಸಿಕೊಂಡಿವೆ. ಮತ್ತದೇ ಹಾದಿಯ ಸಿದ್ದರಾಮಯ್ಯ ಸರ್ಕಾರ 13 ಸಾವಿರ ಕೋಟಿ ರೂಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ರಾಜ್ಯಪಾಲರು ಕೂಡಲೇ ಹಾಲಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಬಿ.ಆನಂದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೈ.ಸುರೇಶ್‌ಕುಮಾರ್, ತಾಲೂಕು ಅಧ್ಯಕ್ಷ ಮುತ್ತುರಾಜ್, ಕರಿಯಪ್ಪ ಇದ್ದರು.