

ಮಂಡ್ಯ: ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಬಂಡವಾಳಶಾಹಿಗಳ ಪರವಾದ ಬಜೆಟ್ ಮಂಡಿಸಿದೆ. ಇದೊಂದು ಸಂವಿಧಾನ ಹಾಗೂ ಶೋಷಿತರ ವಿರೋಧಿ ಬಜೆಟ್. ಇದನ್ನು ಸರಿಪಡಿಸಿ ಪ್ರತ್ಯೇಕ ಬಜೆಟ್ ಮಂಡನೆ ಮಾಡದಿದ್ದರೆ ರಾಜ್ಯಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಎಚ್ಚರಿಕೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ಸಂವಿಧಾನದ ಅನುಚ್ಛೇದ 38, 39 ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಪ್ರಗತಿ ವಿರೋಧಿ ತನವನ್ನು ಬಿಂಬಿಸುತ್ತದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚ ಕಡಿಮೆ ತೋರಿಸಿ ಮಂಡಿಸಿದ್ದು, 4 ಲಕ್ಷ ಕೋಟಿ ರೂನಲ್ಲಿ 116 ಸಾವಿರ ಕೋಟಿ ರೂ ಸಾಲ ಮಾಡಿ ಮಂಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಎಸ್ಸಿ/ಎಸ್ಟಿ ಉಪಯೋಜನೆಯ ಕಾಯ್ದೆಯನ್ವಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಡಿ ಅನುದಾನ ಮೀಸಲಿಟ್ಟಿರುವುದು ಅವೈಜ್ಞಾನಿಕ. ಎಸ್ಸಿ/ಎಸ್ಟಿ ಜನಸಂಖ್ಯೆಯನ್ನು ಅಂತಿಮವಾಗಿ ಪಡೆಯದೇ 2021ರಲ್ಲಿ ಪಡೆದ ಜನಸಂಖ್ಯೆಗನುಗುಣವಾಗಿ ಅನುದಾನ ಮೀಸಲಿಟ್ಟು ಅನ್ಯಾಯ ಮಾಡಲಾಗಿದೆ. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು 42 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟಿದ್ದು, ಅದರಲ್ಲಿ 100 ಕೋಟಿ ರೂ ಸಹ ಸಮುದಾಯವನ್ನು ಸೇರಿರುವುದಿಲ್ಲ ಎಂಬುದು 10 ವರ್ಷದ ಇತಿಹಾಸ ಹೇಳುತ್ತಿದೆ. ತಾವು ನೀಡಿದ ಗ್ಯಾರೆಂಟಿ ಹಾಗೂ ಇತರೆ ಯೋಜನೆಗಳಿಗೆ ಆ ಹಣವನ್ನು ಬಳಕೆ ಮಾಡುತ್ತಾರೆ ಎಂದು ದೂರಿದರು.
ಇದಲ್ಲದೆ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೋಬಳಿ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಕೆರೆಗಳ ಹೂಳೆತ್ತಿಸಿ ನೀರು ತುಂಬಿಸುವುದು, ಮೈಷುಗರ್ ಮೇಲ್ದರ್ಜೆಗೇರಿಸಲು ಒಂದೇ ಕಂತಿನಲ್ಲಿ ಅನುದಾನ ಘೋಷಣೆ, ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ ನಿಗದಿ ಸೇರಿದಂತೆ ಜಿಲ್ಲಾ ಸಂಬಂಧ ಬೇಡಿಕೆಗಳನ್ನು ಈಡೇರಿಸಲು ಸಿಎಂ ಸಿದ್ದರಾಮಯ್ಯ ಸ್ಪಂದಿಸಿಲ್ಲ. ರಾಜ್ಯ ಸರ್ಕಾರ ಬಹುಜನರ ಪಾಲು ನೀಡದ ಬಹುಜನ ವಿರೋಧಿ ನಡವಳಿಕೆಯನ್ನು ಬಿಡದೇ ಹೋದರೆ ಮುಂದಿನ ದಿನಗಳಲ್ಲಿ ಸಚಿವರಿಗೆ ೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಮೈಸೂರು ವಿಭಾಗೀಯ ಸಂಚಾಲಕ ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಬಿ.ಆನಂದ್, ವೈ.ಸುರೇಶ್‌ಕುಮಾರ್, ಮೀನಾಕ್ಷಿ ಕೃಷ್ಣ, ರಾಜು, ತಮ್ಮಯ್ಯ, ರಂಗಸ್ವಾಮಿ ಇದ್ದರು.