ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮವಾಗಲಿ: ದಸಂಸ ಮೈಸೂರು ವಿಭಾಗೀಯ ಸಂಚಾಲಕ ಶಿವರಾಜ್ ಒತ್ತಾಯ

Dalit Sangharsh Samiti press conference Mandya
Published on

ಮಂಡ್ಯ: ವಿಜಯಪುರ ಜಿಲ್ಲೆಯಲ್ಲಿ ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೌರ್ಜನ್ಯವೆಸಗಿದವರ ಆಸ್ತಿ ಮುಟ್ಟುಗೋಲು ಹಾಕಿ ಗಾಯಗೊಂಡವರ ವೈದ್ಯಕೀಯ ವೆಚ್ಚ ಭರಿಸಿ, ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ಶಿವರಾಜ್ ಒತ್ತಾಯಿಸಿದರು.

ಇಟ್ಟಿಗೆ ಕಾರ್ಖಾನೆಯ ಮಾಲೀಕ ತನ್ನ ಕಾರ್ಮಿಕರ ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಪ್ರಕರಣವನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ. ಆರೋಪಿಗಳ ವಿರುದ್ಧ ಗುಂಡಾಕಾಯ್ದೆ ದಾಖಲಿಸಬೇಕು. ಆತನ ಕಾರ್ಖಾನೆಗೆ ಸರ್ಕಾರದಿಂದಲೇ ಬೀಗ ಜಡಿಯಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ದಲಿತರ ಮೇಲೆ ಈ ರೀತಿಯ ದೌರ್ಜನ್ಯಗಳು ನಡೆದಲ್ಲಿ ಆರೋಪಿಗಳು 6 ತಿಂಗಳು ನ್ಯಾಯಾಲಯಕ್ಕೆ ಯಾವುದೇ ರೀತಿಯ ಅರ್ಜಿ ಸಲ್ಲಿಸದಂತೆ ಕಾನೂನು ತಿದ್ದುಪಡಿ ಮಾಡಬೇಕು. ಮಾದಿಗ ಸಮುದಾಯದ ಮೇಲೆ ಕೆಟ್ಟ ಮನಸ್ಥಿತಿಯಿಂದ ನಡೆದುಕೊಳ್ಳುವ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಸಂಚಾಲಕ ಪ್ರಕಾಶ್, ಶೇಖರ್, ಪುಟ್ಟಲಿಂಗಯ್ಯ, ಕೆ.ಸಿ.ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net