

ಮೈಸೂರು: ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಒಂದಾಗುವ ಅನಿವಾರ್ಯತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತ ಚಳವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು ವಿಚಾರ ಸಂಕಿರಣ ಹಾಗೂ ಮೈಸೂರು ವಿಭಾಗೀಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತ ಸಮುದಾಯ ಕೋಮುವಾದಿ ಮತ್ತು ಕಾರ್ಪೋರೇಟ್ ರಾಜಕಾರಣ ನಡುವೆ ನಲುಗುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ನ್ಯಾಯ ಪಡೆಯಲು ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಒಂದಾಗಬೇಕು ಎಂದು ಹೇಳಿದರು.
ಚಂದ್ರಯಾನ, ಮಂಗಳಯಾನ ಕೈಗೊಂಡರೂ ಜನರ ಮನಸ್ಥಿತಿಯಲ್ಲಿ ಬದಲಾವಣೆ ಕಾಣದೆ ಇರುವುದು ಬೇಸರದ ವಿಚಾರ. ಸಮಾನತೆ ಸಾರುವ ಸಂವಿಧಾನ ಕೆಲವರಿಗೆ ಬೇಕಾಗಿಲ್ಲ. ಜನರು ಆಯ್ಕೆ ಮಾಡಿರುವ ಸಂಸತ್ತು ಇರುವಾಗ ಧರ್ಮ ಸಂಸತ್ತಿನ ಸಭೆಗಳು ನಡೆಯುತ್ತಿವೆ. ನಮ್ಮ ಮನಸ್ಸಿನ ಮೇಲೆ ಮಾನಸಿಕ ಯುದ್ಧ ಸಾರಲಾಗಿದೆ. ವೈದಿಕ ಶಾಹಿಯ ದಾಳಿ ಮುಂದುವರಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬುದ್ಧನನ್ನು ಈ ನೆಲದಿಂದ ಓಡಿಸಿದರು. ಸಮಾನತೆ ಸಾರಿದ ಬಸವಣ್ಣ ವೈದಿಕ ಶಾಹಿ ವ್ಯವಸ್ಥೆ ಕಿರುಕುಳ ಕೊಟ್ಟಿತು. ಅಂಬೇಡ್ಕರ್ ಸನಾತನ ಹಿಂದುಗಳ ವಿರೋಧಿಯಲ್ಲ ಎಂದು ಪ್ರಸ್ತುತ ಪ್ರಚಾರ ಮಾಡಲಾಗುತ್ತಿದೆ. ಅಂಬೇಡ್ಕರ್‌ರನ್ನು ಸಂಪೂರ್ಣವಾಗಿ ಹಿಂದೂಕರಣ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಹಿರಿಯ ರಂಗಕರ್ಮಿ ಎಚ್. ಜನಾರ್ದನ, ದಸಂಸ ಮುಖಂಡರಾದ ಸಿದ್ದರಾಜು, ಹಾಲೇಶಪ್ಪ, ಕುಮಾರ್ ಕರಡಿಪುರ, ವಸಂತ, ಮಹದೇವಮ್ಮ, ಮಲ್ಲಹಳ್ಳಿ ನಾರಾಯಣ, ಪ್ರೊ.ನಂಜುಂಡಯ್ಯ, ಎಚ್.ಡಿ.ಕೋಟೆ ಅನುಷಾ ಹಾಗೂ ಇತರರು ಇದ್ದರು.