

ಮಂಡ್ಯ: ಎಸ್‌ಸಿ, ಎಸ್‌ಟಿ ಮತ್ತು ಟಿಎಸ್‌ಪಿ ಅನುದಾದನದಲ್ಲಿ ಮತ್ತೆ 13,000 ಕೋಟಿ ರೂ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು. ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರ ವಜಾ ಮಾಡಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ವಿರೋಧಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನ ವಜಾಗೊಳಿಸಬೇಕು. ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ನೀಡಲು ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿವೆ. ಭಾರತ ಸಂವಿಧಾನದ ಅನುಚ್ಚೇದ 39 ಅನ್ನು ರಾಜ್ಯ ಸರ್ಕಾರಗಳು ಪಾಲಿಸದಿರುವ ಕಾರಣ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇಂದಿಗೂ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ದಲಿತ ಚಳವಳಿಯ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2013ರಲ್ಲಿ ನೆಪಕ್ಕೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಕಾಯ್ದೆಯನ್ನು ಜಾರಿ ಮಾಡಲಾಯಿತು ಎಂದು ಆರೋಪಿಸಿದರು.
2013ರಿಂದ ರಾಜ್ಯ ಬಜೆಟ್‌ನಲ್ಲಿ ಮೀಸಲಿಡುವ ಎಸ್‌ಸಿ, ಎಸ್‌ಟಿ ಮತ್ತು ಟಿಎಸ್‌ಪಿ ಅನುದಾನವನ್ನು ದಲಿತ ಕಾಲನಿಗಳ ಮೂಲ ಸೌಲಭ್ಯದ ಹೆಸರಲ್ಲಿ ಇತರೆ ಜನಾಂಗದ ಕಾಲನಿಗಳಿಗೆ ಪಿಡಬ್ಲುೃಡಿ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಅಭಿವೃದ್ಧಿಗೆ ಕಾನೂನು ಬಾಹಿರವಾಗಿ ದುರ್ಬಳಕೆ ಮಾಡಿದರುವ ಬಗ್ಗೆ ರಾಜ್ಯ ಸರ್ಕಾರ ಮೌನ ವಹಿಸುವ ಮೂಲಕ ಕೋಟ್ಯಂತರ ರೂ ದುರ್ಬಳಕೆ ಕಾಗಿರುವ ಬಗ್ಗೆಯೂ ತನಿಖೆ ನಡೆಸಲು ರಾಜ್ಯಪಾಲರು ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಆನಂದ್, ಸುಸ್ಮಿತಾ, ವೆಂಕಟೇಶ್, ಶರಾವತಿ, ಮುತ್ತುರಾಜ್, ಪುಟ್ಟಲಿಂಗಯ್ಯ ಭಾಗವಹಿಸಿದ್ದರು.