

ಮಂಡ್ಯ: ಸಂವಿಧಾನಬದ್ಧ ಪ್ರಗತಿಪರ ಚಿಂತನೆ ಮಾಡುತ್ತಾ ಸಮಾಜಪರ ಜನಪರ, ಜೀವಪರ ಚಿಂತನೆವುಳ್ಳ ಸ್ವಾಭಿಮಾನಿ ಅಂಬೇಡ್ಕರ್ ವಾದಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ, ಆರ್‌ಎಸ್‌ಎಸ್ ದಲಿತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಅವರು ವಿಧಾನಸೌಧದ ಒಳಗೆ ಹಾಗೂ ಹೊರಗೆ ಬಿಜೆಪಿ, ಆರ್‌ಎಸ್‌ಎಸ್ ಅನ್ನು ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಅವರ ದಿಟ್ಟತನದೆದುರು ಸೋತು ಸುಣ್ಣವಾಗಿ ಮಂಡಿಯೂರಿ ಕುಳಿತಿರುವ ಮನುವಾದಿಗಳು ತಮ್ಮ ಸೋಲನ್ನು ಮುಚ್ಚಿಕೊಳ್ಳುವ ಸಲುವಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಂದ ಇಲ್ಲಸಲ್ಲದ ಹೇಳಿಕೆ ಕೊಡಿಸುತ್ತಿದ್ದಾರೆಂದು ದೂರಿದರು.
ನಾಡಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಸಾಮುದಾಯಿಕ ಸಮಸ್ಯೆಗಳು ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ಬಗೆಗೆ ಗಂಭೀರವಾಗಿ ಚರ್ಚಿಸದ, ಚರ್ಚೆಯಲ್ಲಿ ಪಾಲ್ಗೊಳ್ಳದೆ ನಾರಾಯಣಸ್ವಾಮಿ ಅಸಂವಿಧಾನಿಕವಾಗಿ ವರ್ತಿಸುತ್ತಿದ್ದಾರೆ. ಸಣ್ಣಪುಟ್ಟ ನೆಪ ಇಟ್ಟುಕೊಂಡು ಕಲಬುರಗಿಗೆ ಬಂದು ಖರ್ಗೆ ಅವರನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆದ್ದರಿಂದ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಹಾಗೂ ಪ್ರತಿಪಕ್ಷ ನಾಯಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಂ.ವಿ.ಕೃಷ್ಣ, ನರಸಿಂಹಮೂರ್ತಿ, ಪ್ರದೀಪ್, ಸಂತೋಷ್‌ಕುಮಾರ್ ಇತರರಿದ್ದರು.