

ಮಂಡ್ಯ: ಪಹಲ್ಗಾಮ್‌ನಲ್ಲಿ ಅಮಾಯಕರನ್ನು ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆ ಅಮಾನವೀಯವಾಗಿದೆ. ಇದು ಪೈಶಾಚಿ ಮತ್ತು ಬೀಭತ್ಸ ಉಗ್ರ ದಾಳಿ ಆಗಿದೆ. ದೇಶದ ಶಾಂತಿ ಮತ್ತು ಏಕತೆಗೆ ಅಡ್ಡಿಯುಂಟುಮಾಡುವ ಅಮಾನುಷ ಕೃತ್ಯ ತಡೆಯುವಲ್ಲಿ ವಿಫಲತೆಯನ್ನು ಕಂಡು ಹಿಡಿಯಬೇಕು ಎಂದು ಆಗ್ರಹಿಸಿದರು.
ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದೇಶಭಕ್ತ ನಾಗರಿಕರ ಅಗಲಿಕೆಯ ನೋವು ದೇಶದ ಜನತೆಯನ್ನು ವಿಷಾದದಲ್ಲಿ ಮುಳುಗಿಸಿದೆ. ಯಾವುದೇ ಧರ್ಮದ ಹೆಸರಲ್ಲಿ ಇಂತಹ ಗೊಂದಲ ಹಾಗೂ ಹಿಂಸಾತ್ಮಕ ಘಟನೆಗಳಿಗೆ ಯಾವುದೇ ರೀತಿಯ ಕ್ಷಮೆ ನೀಡಬಾರದು. ಕೇಂದ್ರ ಸರ್ಕಾರ ಕೂಡಲೇ ಈ ಘಟನೆಯಲ್ಲಿ ಭಾಗಿಯಾದ ಉಗ್ರರು ಹಾಗೂ ಅವುಗಳ ಬೆಂಬಲಿಗರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು. ಅಗತ್ಯ ಪುನರ್ವಸತಿ ಸೇವೆ ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉತ್ತಮವಾಗಿರಬೇಕಾದರೆ ಭದ್ರತಾ ವ್ಯವಸ್ಥೆ ಸದೃಢವಾಗಿರಬೇಕು. ಆದರೆ ಈ ಪ್ರಕರಣ ಗಮನಿಸಿದರೆ ವೈಫಲ್ಯ ಕಾಣಿಸುತ್ತಿದೆ. ಭದ್ರತಾ ವ್ಯವಸ್ಥೆಯನ್ನು ತಕ್ಷಣ ಬಲಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಇದರತ್ತ ಗಂಭೀರವಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಆನಂದ ಮದ್ದೂರು, ಸುಶ್ಮಿತಾ, ಅನಿಲ್ಕುಮಾರ್, ತಮ್ಮಣ್ಣ ಇತರರಿದ್ದರು.