ಕಾವೇರಿ ಆರತಿ ನಿಲ್ಲಿಸಿ ಸಂಶೋಧನಾ ಕೇಂದ್ರ ಸ್ಥಾಪಿಸಿ: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹ

Dalit Sangharsh Committee press conference Mandya
Published on

ಮಂಡ್ಯ: ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡುವುದನ್ನು ಬಿಟ್ಟು ಕಾವೇರಿ ನೀರಿನ ಸದ್ಭಳಕೆ ಸಂಬಂಧ ಸಂಶೋಧನೆ ಮತ್ತು ತರಬೇತಿ ಕೇಂದ್ರ ತೆರೆಯಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.

ಕಾವೇರಿ ನದಿಗೆ ವೈಜ್ಞಾನಿಕ ಮತ್ತು ವೈಚಾರಿಕ ಸ್ಪರ್ಶ ನೀಡುವುದನ್ನು ಬಿಟ್ಟು ಕಾವೇರಿ ಆರತಿ ಮೂಲಕ ಮೌಢ್ಯಾಚರಣೆಗೆ ಮುಂದಾಗಿದೆ. ಇದು ಸರಿಯಾದ ನಿರ್ಧಾರವಲ್ಲ. ಯಾವುದಕ್ಕೆ ಆದ್ಯತೆ ನೀಡಬೇಕೋ ಅದನ್ನು ಬಿಟ್ಟು ಜನರಲ್ಲಿ ಮೌಢ್ಯ ಹೆಚ್ಚಿಸುವ ಹಾಗೂ ಅನಗತ್ಯ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.

ಕಾರ್ಖಾನೆಗಳ ತ್ಯಾಜ್ಯ, ನಗರ/ಪಟ್ಟಣ ಪ್ರದೇಶಗಳ ಘನತ್ಯಾಜ್ಯ, ಚರಂಡಿ ನೀರು ಮತ್ತು ಕೊಳಚೆ ನೀರು ಸೇರುವ ಮೂಲಕ ಕಾವೇರಿ ನದಿಯು ಕಲುಷಿತವಾಗುತ್ತಿದೆ. ಇದನ್ನು ತಡೆಯುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಫಲವಾಗಿದ್ದಾರೆ. ಕಾವೇರಿ ನದಿ ಬಗ್ಗೆ ನಿಜವಾಗಿಯೂ ಪ್ರೀತಿ, ಗೌರವ ಮತ್ತು ಭಕ್ತಿ ಇರುವುದಾದರೆ ಕಾವೇರಿ ನದಿಗಿರುವ ಆಂತರಿಕ ಮತ್ತು ಬಾಹ್ಯ ಗಂಡಾಂತರಗಳನ್ನು ನಿವಾರಿಸಬೇಕೆಂದು ಒತ್ತಾಯಿಸಿದರು.

ಕಾವೇರಿ ಅಚ್ಚುಕಟ್ಟು ಪ್ರದೇಶದ ಜನರಲ್ಲಿ ನೀರಿನ ಸದ್ಭಳಕೆ ಮತ್ತು ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾವೇರಿ ನೀರು ಸದ್ಭಳಕಾ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸಬೇಕು. ಆಧುನಿಕ ತಂತ್ರಜ್ಞಾನದ ಬಗ್ಗೆ ಬಳಸಿ ನೀರು ಬಳಕೆಗೆ ಅರಿವು ಮೂಡಿಸಬೇಕು. ಕಾವೇರಿ ಆರತಿಗೆ ನೀಡುವ ಅನುದಾನವನ್ನೇ ಇದಕ್ಕೆ ಬಳಸಬೇಕು. ಜಲವಿವಾದ ಪರಿಹಾರಕ್ಕಾಗಿ ರಾಷ್ಟಿಥಯ ಜಲ ನೀತಿ ರೂಪಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾಧ್ಯಕ್ಷ ಬಿ.ಆನಂದ್, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್, ದೇವರಾಜು, ಪುಟ್ಟಸ್ವಾಮಿ, ಮುತ್ತುರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net