ಸಚಿವ ಮಹದೇವಪ್ಪ ರಾಜೀನಾಮೆ ಕೊಡಲಿ: ದಸಂಸ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್ ಆಗ್ರಹ

Dalit Sangharsh Committee press conference Mandya
Published on

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನಿಲ್ಲಿಸುವ ಮೂಲಕ ರಾಜ್ಯ ಸರ್ಕಾರ ಮೋಸ ಮಾಡಿದೆ. ಇದರ ಹೊಣೆ ಹೊತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ರಾಜೀನಾಮೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್ ಆಗ್ರಹಿಸಿದರು.

ಶಿಕ್ಷಣದಿಂದ ತಮ್ಮ ಬದುಕನ್ನು ಅಸನು ಮಾಡಿಕೊಳ್ಳುವ ಮುಖಾಂತರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿತ್ತು. ಆದರೆ, ಪ.ಜಾತಿ/ಪ.ಪಂಗಡದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಸ್ವಹಿತಾಸಕ್ತಿಗಾಗಿ ತಮ್ಮನ್ನು ತಾವುಗಳು ತೊಡಗಿಸಿಕೊಂಡಿದ್ದಾರೆ. ಯಾವುದೇ ಕಾರಣ ನೀಡದೆ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವುದು ಖಂಡನೀಯ. ಇದಕ್ಕೆ ಹಾಕಿರುವ ಮಾನದಂಡ ಅವೈಜ್ಞಾನಿಕ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಪಿ.ಎಚ್‌ಡಿ ಮತ್ತು ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಹಾಯ ಧನಕ್ಕೂ ಕತ್ತರಿ ಹಾಕಿದೆ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿಕೊಂಡು ಅನ್ಯಾಯ ಮಾಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತುಕೊಂಡು ರಾಜ್ಯದ ಜನತೆಯಲ್ಲಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ ಅವರು, ಮೈಸೂರಿನ ಮುಡಾದಲ್ಲಿ ನಡೆದಿರುವ ಅನ್ಯಾಯಕ್ಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜವಾಬ್ದಾರರು. ಈ ಭೂಮಿ ಪ.ಜಾತಿಗೆ ಸೇರಿದ್ದು, ಹಾಗಾಗಿ ನೇರವಾಗಿ ಮುಖ್ಯಮಂತ್ರಿಗಳೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಅನ್ಯಾಯಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದ್ದು, ಜು.25ರಂದು ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಜು.26ರಂದು ಮೀಸಲಾತಿ ಜನಕ ಛತ್ರಪತಿ ಶಾಹೂ ಮಹಾರಾಜ್ ಜಯಂತಿಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದು, ಜಿಲ್ಲೆಯಿಂದ 100 ಜನರು ಭಾಗವಹಿಸುತ್ತಿರುವುದಾಗಿ ತಿಳಿಸಿದರು.

ಜಿಲ್ಲಾಧ್ಯಕ್ಷ ಚನ್ನಕೇಶವ, ತಾಲೂಕು ಅಧ್ಯಕ್ಷರಾದ ಎಸ್.ಕುಮಾರ, ಕೆ.ಎನ್.ದೇವರಾಜು, ರವಿ ನರಹಳ್ಳಿ, ಕೆ.ಎಂ.ಶ್ರೀನಿವಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net