

ದೇವದುರ್ಗ: ಶರಣರು, ದಾಸರು, ಸಂತರು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಗುರುಗಳಾಗಿದ್ದು, ಅವರ ಮಾರ್ಗದರ್ಶನ ಈಗಲೂ ಅಗತ್ಯವಿದೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಅಸ್ಪಶ್ಯರು, ದೀನ ದಲಿತರ ಮಕ್ಕಳಿಗೆ ವಿದ್ಯಾಕೇಂದ್ರಗಳನ್ನು ತೆರೆದು ವಿದ್ಯಾದಾನ ಮಾಡಿದ ಬ್ರಹ್ಮರ್ಷಿ ನಾರಾಯಣ ಗುರುಗಳು ಅವತಾರ ಪುರುಷರಾಗಿದ್ದಾರೆ. ದಲಿತರ ಉದ್ಧಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಸಂಸಾರ ತ್ಯಜಿಸಿದ್ದರು ನಾರಾಯಣ ಗುರೂಜಿ. ಶರಣ ನುಲಿಯ ಚಂದಯ್ಯ ಅವರು ಕಾಯಕದ ಮೂಲಕ 12ನೇ ಶತಮಾನದಲ್ಲಿ ಬದಲಾವಣೆ ಕ್ರಾಂತಿ ಮಾಡಿದ್ದರು ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, 18ನೇ ಶತಮಾನದ ಮಧ್ಯಭಾಗದ ಜಾತಿ ವ್ಯವಸ್ಥೆಯಲ್ಲಿ ದಲಿತರು, ಹಿಂದುಳಿದವರು ಶೋಷಣೆಗೆ ಒಳಗಾಗಿದ್ದರು. ಅದರ ವಿರುದ್ಧ ನಾರಾಯಣ ಗುರುಗಳು ಹೋರಾಡಿದ್ದರು. ನಾರಾಯಣ ಗುರುಗಳ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿರಸ್ತೇದಾರ್ ಗೋವಿಂದ ನಾಯಕ, ಆರ್‌ಐ ಭೀಮರಾಯ ಮೇಟಿ, ರವಿಕುಮಾರ, ಪ್ರಮುಖರಾದ ರಾಚಣ್ಣ ಅಬಕಾರಿ ಗಣೇಕಲ್, ಗದ್ದೆಪ್ಪ ಗುತ್ತೇದಾರ್, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ರಂಗನಾಥ ಅಬಕಾರಿ, ಅಮರೇಶ ಗುತ್ತೇದಾರ, ಚನ್ನಬಸವ, ಲಿಂಗಯ್ಯ ಮಸರಕಲ್, ಮೌನೇಶ, ರಂಗನಾಥ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಎಂ.ಆರ್.ಎಚ್.ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಪುರ ಇದ್ದರು.