

ಮಡಿಕೇರಿ: ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಸ್ಥಾಪಿತ) ವತಿಯಿಂದ ನೀಡಲಾಗುವ ದಲಿತ ರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮ ೨೦೨೩ರ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಗರದ ಗಾಂಧಿಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪ನೇ ವರ್ಷದ ಪ್ರಶಸ್ತಿಯನ್ನು ಸಮಾಜ ಮುಖಿ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಿದ್ದರಾಮಯ್ಯರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಅಂದಿನ ಕಾರ್ಯಕ್ರಮಕ್ಕೆ ಹತ್ತು ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಜಿಲ್ಲೆಯ ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಅಂದು ಸಿದ್ದರಾಮಯ್ಯರವರನ್ನು ಕುಶಾಲನಗರದಲ್ಲಿ ಸ್ವಾಗತಿಸಿ, ಸುಮಾರು ೫೦ ಬೈಕ್‌ಗಳೊಂದಿಗೆ ಮಡಿಕೇರಿಗೆ ಕರೆತರಲಾಗುವುದು. ಮಡಿಕೇರಿಯ ಸುದರ್ಶನ ವೃತ್ತದಲ್ಲಿ ಮತ್ತೊಮ್ಮೆ ಸ್ವಾಗತಿಸಿ ಸುಮಾರು ೧೫೦ಕ್ಕೂ ಅಧಿಕ ವಾಹನದೊಂದಿಗೆ ಜಾಥ ಮತ್ತು ಕಳಸಹೊತ್ತ ೫೦ ವಿದ್ಯಾರ್ಥಿಗಳೊಂದಿಗೆ ಗಾಂಧಿಮೈದಾನಕ್ಕೆ ಕರೆತರಲಾಗುವುದು. ಈ ಸಂದರ್ಭ ಮಾಜಿ ಸಂಸದ ಧ್ರುವ ನಾರಾಯಣ, ಶಾಸಕ ಪ್ರಿಯಾಂಕ ಖರ್ಗೆ, ಕಾಂಗ್ರೆಸ್ ಮುಖಂಡ ಎಚ್.ಸಿ.ಮಹದೇವಪ್ಪ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ದಲಿತ ಸಂಘರ್ಷ ಜಿಲ್ಲಾ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ೩೪ನೇ ವರ್ಷದ ಸನ್ಮಾನ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ೬೦ಕ್ಕೂ ಅಧಿಕ ಅಂಕಗಳಿಸಿದ ದಲಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಜಾತಿ ದೃಢಿಕರಣ ಪತ್ರ ಮತ್ತು ಅಂಕಪಟ್ಟಿ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ೯೬೧೧೭೬೬೭೧೩, ೯೪೮೧೫೨೩೬೪೮ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಸಂಚಾಲಕ ಎಚ್.ಎಸ್.ಗಣೇಶ್, ಮಡಿಕೇರಿ ನಗರ ಸಂಚಾಲಕ ಸಿದ್ದೇಶ್ವರ್, ಸಂಚಾಲಕ ಜಯಕುಮಾರ್, ಸದಸ್ಯ ಕೆ.ಪಿ.ರಂಜಿತ್ ಉಪಸ್ಥಿತರಿದ್ದರು.