

ಆಲೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಶುಕ್ರವಾರ ನಗರದ ತಾಲೂಕು ಮಿನಿ ವಿಧಾನಸೌಧ ಆವರಣದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಬಸವರಾಜು ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಅಮಿತ್ ಷಾ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ ಮಾತನಾಡಿ, ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಸಂವಿಧಾನದ ಅಡಿಯಲ್ಲಿ ಚುನಾವಣೆಯಲ್ಲಿ ಗೆದ್ದು ಸಚಿವನಾಗಿರುವ ಅಮಿತ್ ಷಾ ಅವರಿಗೆ ಅಂಬೇಡ್ಕರ್ ಬಗ್ಗೆ ಇರುವ ಗೌರವ ಅಧಿವೇಶನದಲ್ಲಿ ಬಹಿರಂಗವಾಗಿದೆ. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ಅಮಿತ್ ಷಾ ಹೇಗೆ ಕೇಂದ್ರ ಸಚಿವರಾಗುತ್ತಿದ್ದರು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಎಸ್ಸಿ, ಎಸ್ಟಿ ಘಟಕ ಉಪಾಧ್ಯಕ್ಷ ರವಿ ಕಾರ್ಜುವಳ್ಳಿ, ತಾಲೂಕು ಅಧ್ಯಕ್ಷ ಲೋಕೇಶ್ ಅಜ್ಜೆನಹಳ್ಳಿ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಲೋಹಿತ್ ಕುಮಾರ್ ಹಸುಗನೂರು, ಭೀಮಾ ಆರ್ಮಿ ತಾಲೂಕು ಜಗದೀಶ್ ನಿಡನೂರು, ಪ್ರಧಾನ ಕಾರ್ಯದರ್ಶಿ ಹರೀಶ್, ಖಜಾಂಚಿ ಮಂಜುನಾಥ್, ದಲಿತ ಮುಖಂಡರಾದ ರಂಗಯ್ಯ, ಧರ್ಮಣ್ಣ, ಹೊನ್ನಪ್ಪ, ಕಾಂಗ್ರೆಸ್ ಮುಖಂಡರಾದ ಟೀಕರಾಜು, ರಂಗೇಗೌಡ, ಕಬೀರ್ ಅಹಮದ್, ನಂದೀಶ್ ಬ್ಯಾಬ, ಮಧು ಉಪಸ್ಥಿತರಿದ್ದರು.