ಕೇಂದ್ರ ಗೃಹ ಸಚಿವರ ಹೇಳಿಕೆಗೆ ದಲಿತ ಸಂಘಟನೆಗಳ ಆಕ್ರೋಶ, ರಸ್ತೆಯಲ್ಲಿ ಪ್ರತಿಭಟನೆ

IMG-20241220-WA0075.jpg
Published on


ಚಿಕ್ಕಬಳ್ಳಾಪುರ: ಸಂವಿಧಾನಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಸಚಿವರ ರಾಜೀನಾಮೆಗೆ ಒತ್ತಾಯಿಸಿವೆ.
ಚಿಕ್ಕಬಳ್ಳಾಪುರ ‌ನಗರದಲ್ಲಿ ಮಾನವ ಸರಪರಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಧಿಕ್ಕಾರಗಳನ್ನು ಕೂಗಿದರು.‌
ಮೋದಿಯಿರಲಿ ಅಮಿತ್ ಶಾ ಇರಲಿ, ಅವರಿಗೆ ಈ ದೇಶದ ಇತಿಹಾಸ ಗೊತ್ತಿಲ್ಲ. ಅರಿವು ಗೇಡಿಯಾಗಿ ಹೇಳಿಕೆ ನೀಡಿರುವ ಗೃಹ ಸಚಿವರ ಕಾರಣದಿಂದ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿದೆ. ಅಂಬೇಡ್ಕರ್ ಹೆಸರೇಳಲು  ಅವಮಾನ ಆಗುವುದಾದರೆ ನೀವು ಈ ದೇಶವನ್ನು ಬಿಟ್ಟು ಪಾಕಿಸ್ಥಾನಕ್ಕೆ ತೊಲಗಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸುಧಾ ವೆಂಕಟೇಶ್ ಗುಡುಗಿದರು.
ಕೇಂದ್ರ ಗೃಹ ಮಂತ್ರಿ ಕೂಡಲೇ ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮತ್ತು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಗ.ನಾ.ಅಶ್ವತ್ಥ್ ಮಾತನಾಡಿ, ದೇಶದಲ್ಲಿ ಬಿಜೆಪಿ ಮುಖಂಡರು ಮತ್ತು ಸರ್ಕಾರ ಮೋದಿ ಮೋದಿ ಎಂದು ಅಬ್ಬರಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾದ ನಡೆಯನ್ನು ಅನುಸರಿಸುತ್ತಿರುವುದು ಗೊತ್ತಿದೆ. ಇದೇ ಮೋದಿ ಅಮಿತ್ ಶಾ ಕುಮ್ಮಕ್ಕಿನಲ್ಲಿ ಗುಜರಾತ್‌ನ ಗೋದ್ರಾದಲ್ಲಿ ನಡೆಸಿರುವ ನರಮೇಧ ಇನ್ನೂ ಮನಸ್ಸಿಂದ ಮಾಸಿಲ್ಲ. ಗರ್ಭಿಣಿ ಹೊಟ್ಟೆಯನ್ನು ಸೀಳಿ ತ್ರಿಶೂಲಕ್ಕೆ ಕಂದಮ್ಮನನ್ನು ನೇತಾಕಿ ಕೇಕೆ ಹಾಕಿದ್ದನ್ನು  ಮರೆತಿರಬಹುದು. ಆದರೆ ಅಹಿಂದ ಒಕ್ಕೂಟ ಮತ್ತು ಮಾನವೀಯ ಮನಸ್ಸುಗಳು ಮರೆತಿಲ್ಲ.  ಮುಖವಾಡವನ್ನು ಕಳಚುವ ದಿನಗಳು ದೂರವಿಲ್ಲ. ಸುಳ್ಳನ್ನು ಹೇಳಿ ಮೋಸಮಾಡುವುದು ಇಲ್ಲಿಗೇ ನಿಲ್ಲಬೇಕು. ರಾಜ್ಯಾಂಗ ನೀಡಿರುವ ಹಕ್ಕನ್ನು ಅನುಭವಿಸಿ ಅದರ ಮೇಲೆ ಸವಾರಿ ಮಾಡುವ ಹೀನ ಪ್ರವೃತ್ತಿ ಬಿಟ್ಟು,ಅಂಬೇಡ್ಕರ್ ಬಗ್ಗೆ ತಪ್ಪು ಹೇಳಿಕೆ ಕೊಡುವುದನ್ನು ಬಿಡಬೇಕು  ಎಂದು ಗುಡುಗಿದರು. ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರ ಪತಿಗೆ ಮನವಿ ಪತ್ರವನ್ನು ರವಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಶ್ರೀನಿವಾಸ್, ಬಿ.ವಿ.ಆನಂದ್, ಕೆ.ಎ. ನಾರಾಯಣಸ್ವಾಮಿ, ವೆಂಕಟೇಶ್, ರಮಣಪ್ಪ, ಸಾಗರ್, ಗೌತಮ್ ಗಂಗಾಧರ್, ಮುನಿಕೃಷ್ಣಪ್ಪ ತಿಪ್ಪೇನಹಳ್ಳಿ ನಾರಾಯಣ್ ಮತ್ತಿತರರು  ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net