ಸಮಸ್ಯೆಗಳನ್ನು ಬಿಚ್ಚಿಟ್ಟ ದಲಿತ ಮುಖಂಡರು

ಕೊಳ್ಳೇಗಾಲ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ   ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ಎಂ.ಧರ್ಮೇಂದ್ರ ಮಾತನಾಡಿದರು.
ಕೊಳ್ಳೇಗಾಲ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಡಿವೈಎಸ್ಪಿ ಎಂ.ಧರ್ಮೇಂದ್ರ ಮಾತನಾಡಿದರು.
Published on

ಕೊಳ್ಳೇಗಾಲ: ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ತಮ್ಮ ಅಳಲು ತೋಡಿಕೊಂಡರು.

ಹನೂರು ಪಟ್ಟಣದ ನಾಗೇಂದ್ರ ಮಾತನಾಡಿ, 2 ತಿಂಗಳ ಹಿಂದೆ ನಾನು ಸ್ನೇಹಿತರೊಟ್ಟಿಗೆ ಶಾಗ್ಯ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಹೋಟೆಲ್‌ಗಳಲ್ಲಿ ದಲಿತರೆಂದು ತಿಳಿದು ಟೀ ನೀಡುತ್ತಿಲ್ಲ. ಈ ದೌರ್ಜನ್ಯವನ್ನು ಪೊಲೀಸ್ ಇಲಾಖೆ ತಡೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿದ್ದ ಡಿವೈಎಸ್ಪಿ, ಕೂಡಲೇ ಪರಿಶೀಲಿಸುವ ಜತೆಗೆ ಅಲ್ಲಿನ ಹೋಟೆಲ್ ಮಾಲೀಕರಿಗೆ ಜಾಗೃತಿ ಮೂಡಿಸಿ ಇಲ್ಲವೇ ಕಾನೂನು ಕ್ರಮ ಕೈಗೊಳ್ಳಿ ಎಂದು ಇನ್ಸ್‌ಪೆಕ್ಟರ್ ಶಶಿಕುಮಾರ್ ಅವರಿಗೆ ತಾಕೀತು ಮಾಡಿದರು.

ಭೀಮನಗರದ ಯಜಮಾನ ಎಂ.ಪಾಪಣ್ಣ ಮಾತನಾಡಿ, ಜಿಲ್ಲೆಯಲ್ಲಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯಗಳಿಗೆ ಖುದ್ದು ಭೇಟಿ ನೀಡಿ ಮಕ್ಕಳು ದೌರ್ಜನ್ಯ ರಹಿತವಾಗಿ ವಾಸ್ತವ್ಯ ಹೂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಡಿವೈಎಸ್ಪಿ ಎಂ. ರಾಜೇಂದ್ರ ಅವರಿಗೆ ಸಲಹೆ ನೀಡಿದರು. ಪಟ್ಟಣದ ಬಾಲಕಿಯರ ಹಾಸ್ಟೆಲ್ ಮತ್ತು ಶಾಲೆಯ ಕೂಗಳತೆ ದೂರದಲ್ಲಿರುವ ಶಕ್ತಿ ವೈನ್ಸ್ ಅನ್ನು ಸ್ಥಳಾಂತರಿಸಬೇಕು ಎಂದರು.

ಯಜಮಾನ್ ಎಂ.ಸಿದ್ದಾರ್ಥ ಮಾತನಾಡಿ, ಪಟ್ಟಣದ ದಲಿತ ಕಾಲನಿಗಳಲ್ಲಿ ಯುವಕರು ಗಾಂಜಾ ಸೇವನೆಗೆ ದಾಸರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಲಿತರ ಕಾಲನಿಯಲ್ಲಿ ಎಸ್ಸಿ-ಎಸ್ಟಿ ಸಭೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿರುವ ಮದ್ಯ ಅಕ್ರಮ ಮಾರಾಟವನ್ನು ತಡೆಯಬೇಕು ಎಂದರು.
ಪಟ್ಟಣದಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಭೀಮನಗರದ ರಾಜೇಂದ್ರ ಒತ್ತಾಯಿಸಿದರೆ, ಎಂಇಜಿಪಿ ಯೋಜನೆಯಡಿ ಎಸ್ಸಿ-ಎಸ್ಟಿಗಳಿಗೆ ನೀಡಬೇಕಾದ ಶೇ.35 ರಷ್ಟು ಸಬ್ಸಿಡಿ ಮಂಜೂರಾಗಿಲ್ಲ. ಈ ಕಾರಣಕ್ಕೆ ಬ್ಯಾಂಕ್‌ಗಳಿಂದ ದಲಿತರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಮುಳ್ಳೂರು ಮಂಜುನಾಥ್ ದೂರಿದರು. ಇದಕ್ಕೆ ಡಿವೈಎಸ್ಪಿ ಎಂ.ಧರ್ಮೇಂದ್ರ ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುವುದು ಎಂದರು.

ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ನಡೆಸುವ ಕುರಿತು ಮುಖಂಡರಿಗೆ ಸಮರ್ಪಕವಾಗಿ ಮಾಹಿತಿ ದೊರೆಯುತ್ತಿಲ್ಲ. ಬೆರಳೆಣಿಕೆ ಜನರು ಹಾಗೂ ಅಲ್ಲಿ ಇಲ್ಲಿ ನಿಂತಿರುವ ಸಾರ್ವಜನಿಕರನ್ನು ಕರೆತಂದು ಕಾಟಾಚಾರಕ್ಕೆ ಸಭೆ ಮಾಡಲಾಗುತ್ತಿದೆ ಎಂದು ಮಧುನಾಯಕ್ ದೂರಿದರು.

ದಲಿತ ಮುಖಂಡ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಬಿ.ಆರ್.ಹಿಲ್ಸ್, ರಾಮಾಪುರ ಭಾಗದಲ್ಲಿ ಇಂತಹ ಸಭೆ ಹೆಚ್ಚು ನಡೆಯಬೇಕಿದೆ. ಅಲ್ಲದೆ, ಕುರುಬನಕಟ್ಟೆ, ಚಿಕ್ಕಲ್ಲೂರು, ಶಿವನಸಮುದ್ರ ಧಾರ್ಮಿಕ ಕ್ಷೇತ್ರಗಳಲ್ಲಿ ದಲಿತರಿಗೆ ಕೆಲಸ ಸಿಗುತ್ತಿಲ್ಲ. ಪಟ್ಟಣದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುತ್ತಮುತ್ತ ಅಕ್ರಮ ಗಾಂಜಾ, ಡ್ರಕ್ಸ್ ಮಾರಾಟ ಹಾವಳಿ ತಪ್ಪಿಸಿ ಎಂದು ಮನವಿ ಮಾಡಿದರು.

ಮಾಧ್ಯಮದರಿಗೂ ಮಾಹಿತಿ ಇಲ್ಲ: ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ ಬಹಳ ಮಹತ್ವದ್ದಾಗಿದೆ. ಬುಧವಾರ ನಡೆದ ಸಭೆಯ ಬಗ್ಗೆ ಮಾಧ್ಯಮಗಳಿಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿಲ್ಲ ಎಂದು ಸಭೆಯಲ್ಲಿದ್ದ ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಕೊಳ್ಳೇಗಾಲ ಹಾಗೂ ಹನೂರು ಎರಡೂ ತಾಲೂಕು ವ್ಯಾಪ್ತಿಯಲ್ಲಿ 450ಕ್ಕೂ ಹೆಚ್ಚು ಹಳ್ಳಿಗಳಿವೆ. ಒಂದು ಕೊಠಡಿಯೊಳಗೆ 50 ಜನರನ್ನು ಕೂರಿಸಿ ಸಭೆ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಧರ್ಮೇಂದ್ರ, ಇನ್ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಸ್ಪಿ ಎಂ.ಧರ್ಮೇಂದ್ರ, ಇಂದಿನ ಸಭೆಯಲ್ಲಿ 24 ವಿಷಯಗಳು ಚರ್ಚೆಗೆ ಬಂದಿದೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಪರಿಹರಿಸಿ, ಅನುಪಾಲನ ವರದಿ ನೀಡಲಾಗುವುದು. ಮುಂದಿನ ಸಭೆಯನ್ನು ಸತ್ತೇಗಾಲ, ಪಾಳ್ಯ, ದೊಡ್ಡಿಂದುವಾಡಿ, ಹನೂರು, ರಾಮಾಪುರ ಸೇರಿದಂತೆ ಆಯಾ ಗ್ರಾಮಗಳಲ್ಲಿಯೇ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಿಪಿಐ ಶಿವಮಾದಯ್ಯ, ಪಿಎಸೈಗಳಾದ ಮಹೇಶ್ ಕುಮಾರ್, ಗಣೇಶ್, ಬಸವರಾಜು, ರಾಧಾ, ಉಮಾವತಿ, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎಂ.ನಟರಾಜ ಮಾಳಿಗೆ, ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಮುಖಂಡ ಬಾಲರಾಜು, ಮಾರ್ಟಳ್ಳಿ ರಾಮಲಿಂಗ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net