ನಾಡಗೀತೆಯಲ್ಲಿದ್ದ ಮೂಲ ಪದ ಸರಿಪಡಿಸದಿದ್ದರೆ ಹೋರಾಟ : ದಲಿತ ಮುಖಂಡರ ಎಚ್ಚರಿಕೆ

Published on

ಮೈಸೂರು: ನಾಡಗೀತೆಯಲ್ಲಿ ಇದ್ದ ಮೂಲ ‘ಬೌದ್ಧರುದ್ಯಾನ’ ಪದವನ್ನು ಮರೆಮಾಚಿ ‘ಜೈನರುದ್ಯಾನ’ ಎಂದು ಪದ ಸೇರಿಸಲಾಗಿದೆ. ಇದನ್ನು ಸರಿಪಡಿಸದಿದ್ದರೆ ಹೋರಾಟ ನಡೆಸುವುದಾಗಿ ಮಾಜಿ ಮೇಯರ್ ಪುರುಷೋತ್ತಮ ಎಚ್ಚರಿಸಿದರು.

ಕುವೆಂಪು ಅವರ ಮೂಲ ಗೀತೆಯಲ್ಲಿ ‘ಬೌದ್ಧರುದ್ಯಾನ’ ಪದ ಇತ್ತು. ಆದರೆ ಅದನ್ನು ಮರೆಮಾಚಿ ‘ಜೈನರುದ್ಯಾನ’ ಎಂದು ನಾಡಗೀತೆಯಲ್ಲಿ ಸೇರಿಸಲಾಗಿದೆ. ಹೀಗಾಗಿ ನವೆಂಬರ್ ಒಂದಕ್ಕೆ ಮುನ್ನ ಈ ಪದ ಮತ್ತೆ ಸೇರಿಸಬೇಕು. ಇಲ್ಲದಿದ್ದರೆ ಧಮ್ಮದೀಪ ಪ್ರತಿಷ್ಠಾನ ಮತ್ತು ವಿಶ್ವಮೈತ್ರಿ ಬುದ್ಧ ವಿಹಾರದಿಂದ ಹೋರಾಟ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಕುವೆಂಪು ಅವರಿಗೂ ಬುದ್ಧನ ಬಗ್ಗೆ ಅಪಾರ ಪ್ರೀತಿಯಿತ್ತು. ಹೀಗಾಗಿ ‘ಬೌದ್ಧರುದ್ಯಾನ’ ಪದ ಸೇರಿಸುವ ಮೂಲಕ ಕುವೆಂಪು ಅವರಿಗೂ ಗೌರವ ತೋರಿದಂತಾಗುತ್ತದೆ ಎಂದರು.

ಮಾನವೀಯತೆ ಬಿತ್ತಿದ ಬುದ್ಧನ ಬೌದ್ಧ ಧರ್ಮವನ್ನು ಏಕೆ ನಾಡಗೀತೆಯಿಂದ ಬಿಟ್ಟಿದ್ದಾರೆ ಎನ್ನುವುದು ಅರ್ಥವಾಗದು. ಬುದ್ಧ ಪ್ರಪಂಚದಾದ್ಯಂತ ಶಾಂತಿಯ ಸಂದೇಶ ವಿಸ್ತರಿಸಿದವನಾಗಿದ್ದಾನೆ. ಕೆಲವರು ಮೂಲ ಗೀತೆಯಲ್ಲಿದ್ದ ಪದವನ್ನು ಕೈಬಿಟ್ಟು ಅಗೌರವ ತೋರಿದ್ದಾರೆ ಎಂದು ಟೀಕಿಸಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸೂಕ್ತ. ಮಹಿಳೆಯೊಬ್ಬರಿಗೆ ಕೊಡುತ್ತಿರುವ ಗೌರವವೂ ಇದಾಗಿದೆ. ಅವರ ಆಯ್ಕೆ ವಿರೋಧಿಸುವವರು ಎಂದಾದರೂ ಬುಕರ್ ಪ್ರಶಸ್ತಿ ಪಡೆದಿದ್ದಾರೆಯೇ? ಅಥವಾ ಬುಕರ್ ಪ್ರಶಸ್ತಿ ಎಂದರೆ ಏನು, ಅದರ ಮಹತ್ವ ಏನು ಎನ್ನುವುದು ತಿಳಿದಿದೆಯೇ, ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದರು.

ಲೇಖಕ ಡಾ.ಚಿಂ.ಬ.ಬಸವರಾಜ್ ಮಾತನಾಡಿ, ನಾಡಗೀತೆಯಿಂದ ‘ಬೌದ್ಧರುದ್ಯಾನ’ ಪದ ತೆಗೆದಿರುವ ಬಗ್ಗೆ ಈ ಹಿಂದೆಯೇ ನಾವು ಗಮನ ಸೆಳೆದಿದ್ದು, ಹಿರಿಯ ಸಾಹಿತಿ ಡಾ.ಸಿ.ಪಿ.ಕೆ. ಸಹ ತಮ್ಮ ಮಾತಿಗೆ ಸಹಮತ ವ್ಯಕ್ತಪಡಿಸಿದ್ದರು. ನಾಡಗೀತೆ ಎಂದು ಅಧಿಕೃತಗೊಳಿಸುವ ವೇಳೆ ಯಾರೋ ತಿರುಚಿದ ಗೀತೆ ಸರ್ಕಾರಕ್ಕೆ ಸಲ್ಲಿಸಿದರು ಎಂದು ಹೇಳಿದರು.

ಈ ಕುರಿತ ಸಮಿತಿಯಲ್ಲಿ ಯಾರು ಈ ಕೆಲಸ ಮಾಡಿದರು ಎಂಬುದು ತಿಳಿದುಬಂದಿಲ್ಲ. ಆದರೆ ಕುವೆಂಪು ಅವರ ಗೀತೆಯನ್ನು ಅಪಮೌಲ್ಯ ಮಾಡಿರುವುದಂತೂ ನಿಜ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸರ್ಕಾರದ ಪ್ರಮುಖರು ಈ ಬಗ್ಗೆ ಗಮನಹರಿಸಿ ಲೋಪ ಸರಿಪಡಿಸಬೇಕು. ಅಲ್ಲಿಯವರೆಗೂ ನಾಡಗೀತೆ ಹಾಡುವಾಗ ನಾವು ಯಾರು ಎದ್ದು ನಿಲ್ಲುವುದಿಲ್ಲ ಎಂದು ಹೇಳಿದರು.

ಮುಖಂಡರಾದ ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net