ದಲಿತ ಕೇರಿಯ ದಾರಿ ಸಮಸ್ಯೆ ಬಗೆಹರಿಸಿ

ROAD
ಗುಡೇಕೋಟೆ ಸಮೀಪದ ಕೆ.ರಾಯಾಪುರ ಗ್ರಾಮದಲ್ಲಿ ದಲಿತ ಕೇರಿಗೆ ಹೋಗುವ ದಾರಿ ಸಮಸ್ಯೆಯಾಗಿರುವುದರಿಂದ ದಸಂಸ ಪದಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಸಂಸ ಮುಖಂಡರಾದ ದುರುಗೇಶ್, ವಿಶಾಲಾಕ್ಷಿ ರಾಜಣ್ಣ, ಎಳನೀರು ಗಂಗಣ್ಣ, ಪಶುರಾಮ, ಹನುಮೇಶ ಇತರರಿದ್ದರು.
Published on

ಕಾನಹೊಸಹಳ್ಳಿ: ಗುಡೇಕೋಟೆ ಸಮೀಪದ ಗಡಿಭಾಗದ ಕೆ.ರಾಯಾಪುರ ಗ್ರಾಮದಲ್ಲಿ ದಲಿತ ಕೇರಿಗೆ ತೆರಳುವ ದಾರಿ ಸಮಸ್ಯೆ ಉಲ್ಬಣಿಸಿದ್ದು, ಇದರಿಂದ ದಲಿತರು ತಮ್ಮ ಕೇರಿಗೆ ಹೋಗಿ, ಬರುವುದಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ವಿಜಯನಗರ ಜಿಲ್ಲಾಧ್ಯಕ್ಷ ಕೂಡ್ಲಿಗಿ ಎಸ್.ದುರುಗೇಶ ಆಗ್ರಹಿಸಿದರು.

ಗ್ರಾಮದಲ್ಲಿ ದಲಿತ ಮುಖಂಡರೊಂದಿಗೆ ಶನಿವಾರ ಸಭೆ ನಡೆಸಿ, ಕೆ.ರಾಯಾಪುರದಲ್ಲಿ ಎಲ್ಲ ಸಮುದಾಯದವರು ಅಣ್ಣ-ತಮ್ಮಂದಿರಂತೆ ಇದ್ದಾರೆ. ಆದರೆ, ಇತ್ತೀಚೆಗೆ ಕೆಲವರು ದಲಿತ ಕೇರಿಗೆ ಹೋಗುವ ದಾರಿಗೆ ಸಮಸ್ಯೆ ಮಾಡಿರುವುದು ದಲಿತರಿಗೆ ತೊಂದರೆಯಾಗಿದೆ.

ಕಾನೂನು ಹೋರಾಟ

ಗ್ರಾಮದ ದಲಿತರ ಪರವಾಗಿ ನಾವು ಕಾನೂನು ಹೋರಾಟಕ್ಕೂ ಸಿದ್ಧವಿದ್ದೇವೆ. ಆದರೂ, ಸೌಹಾರ್ದಯುತವಾಗಿ ಗ್ರಾಮದ ಜನ ಇರಬೇಕು ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ದಲಿತರ ದಾರಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ಕಾಂಗ್ರೆಸ್ ಎಸ್ಸಿ ಮಹಿಳಾ ಘಟಕದ ವಿಜಯನಗರ ಜಿಲ್ಲಾಧ್ಯಕ್ಷೆ ಗುಡೇಕೋಟೆ ವಿಶಾಲಾಕ್ಷಿ ಎಂ.ರಾಜಣ್ಣ ಮಾತನಾಡಿ, ದಲಿತರ ಕೇರಿಗೆ ಹೋಗುವ ದಾರಿ ಸಮಸ್ಯೆಯನ್ನು ಯಾವುದೇ ಗಲಾಟೆ ಆಗದಂತೆ ಬಗೆಹರಿಸಿಕೊಳ್ಳೋಣ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸುತ್ತೇವೆ. ಗ್ರಾಮದ ಎಲ್ಲ ಸಮುದಾಯದವರು ಪರಸ್ಪರ ಸಹೋದರರಂತೆ ಬಾಳೋಣ ಎಂದರು.

ಜಿಲ್ಲಾ ಖಜಾಂಚಿ ಮಾಕನಡುಕು ಕುಮಾರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗೆದ್ದಲಗಟ್ಟೆ ಹನುಮೇಶ, ಸಿದ್ದಾಪುರ ಡಿ.ಎಂ.ಈಶ್ವರಪ್ಪ, ಕಾನಮಡುಗು ದುರುಗಪ್ಪ, ತಾಲೂಕು ಸಂಚಾಲಕ ಕಾನಹೊಸಹಳ್ಳಿ ಎಳನೀರು ಗಂಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net