ಗ್ರಾಮ ಠಾಣಾ ಜಾಗದಲ್ಲಿ ಬಿಡಾರ ಹೂಡಿದ ದಲಿತ ಕುಟುಂಬಗಳು

ಕಂಪಲಾಪುರದ ಕೆಂಪಿಕೆರೆ 2
1 ಕಂಪಲಾಪುರದ ಕೆಂಪಿಕೆರೆ ಬಳಿ ಇರುವ ಗ್ರಾಮಠಾಣಾ ಜಾಗದಲ್ಲಿ ದಲಿತರಿಗೆ ಮಾತ್ರ ಮನೆಕಟ್ಟಿಕೊಳ್ಳಲು ಅವಕಾಶ ನೀಡಬೇಕೆಂದು ಟೆಂಟ್ ಹಾಕಿದ್ದ ಜಾಗಕ್ಕೆ ಭೇಟಿ ನೀಡಿದ್ದ ತಾ.ಪಂ.ಇಒ ಸುನಿಲ್ ಕುಮಾರ್, ತಹಸೀಲ್ದಾರ್ ನಿಸರ್ಗಪ್ರಿಯ ದಸಂಸ ರಾಜ್ಯಾಧ್ಯಕ್ಷ ರಾಜಯ್ಯ ಚರ್ಚಿಸಿದರು. ಇನ್‌ಸ್ಪೆಕ್ಟರ್ ನಾಗರಾಜ್, ಪಿಡಿಒ ಪರಮೇಶ್, ದಲಿತ ಮುಖಂಡ ರಾಮು , ಜಯರಾಂ ಮತ್ತಿತರರು ಇದ್ದರು. 2 ಕಂಪಲಾಪುರ ದ ಗ್ರಾಮ ಠಾಣಾ ಜಾಗದಲ್ಲಿ ಮನೆಕಟ್ಡಿಕೊಳ್ಳಲು ದಲಿತರಿಗೆ ಮಾತ್ರ ಅವಕಾಶ ನೀಡಬೇಕೆಂದು ತಾ.ಪಂ.
Published on

ಕಂಪಲಾಪುರ: ಗ್ರಾಮಠಾಣಾ ಜಾಗದಲ್ಲಿ ಏಕಾಏಕಿ ನೂರಕ್ಕೂ ಹೆಚ್ಚು ದಲಿತ ಕುಟುಂಬಗಳು ಇತ್ತೀಚೆಗೆ ಟೆಂಟ್ ಹಾಕಿಕೊಂಡಿದ್ದ ಸ್ಥಳಕ್ಕೆ ಗುರುವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಿಕೆರೆ ಪಕ್ಕ ಸರ್ವೇ ನಂ. 379 ,381 , 382, 386, 387ರಲ್ಲಿ 4 ಎಕರೆ 22 ಗುಂಟೆ ಗ್ರಾಮ ಠಾಣಾ ಜಾಗ ಇದೆ. ಇದು ಕಳೆದ ವರ್ಷ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿ ಪರಮೇಶ್ ಹಾಗೂ ಸದಸ್ಯರು ಮೇಲಧಿಕಾರಿಗಳ ಗಮನಕ್ಕೆ ತಂದು ಸರ್ವೇ ಮಾಡಿಸಿ ಜಮೀನನ್ನು ಉಳುಮೆ ಮಾಡುತ್ತಿದ್ದ ರೈತರ ಮನವೊಲಿಸಿ ಸರ್ಕಾರದ ಜಾಗವನ್ನು ವಶಕ್ಕೆ ಪಡೆದು ಜೆಸಿಬಿ ಮೂಲಕ ಸುತ್ತಲೂ ಹಳ್ಳ ತೆಗೆಸಿದ್ದರು.

ಆದರೆ ನೂರಕ್ಕೂ ಹೆಚ್ಚು ದಲಿತ ಕುಟುಂಬಗಳು ಇತ್ತೀಚೆಗೆ ಟೆಂಟ್ ಹಾಕಿಕೊಂಡಿದ್ದ ಜಾಗದಲ್ಲಿ ನಮ್ಮ ಪೂರ್ವಿಕರು ವಾಸವಾಗಿದ್ದರು. ಹಾಗಾಗಿ ಈ ಜಾಗ ನಮಗೆ ಸೇರಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿದು ಗುರುವಾರ ತಾಪಂ ಇಒ ಸುನಿಲ್ ಕುಮಾರ್ ತಹಸೀಲ್ದಾರ್ ನಿಸರ್ಗಪ್ರಿಯ ಹಾಗೂ ಸಿಬ್ಬಂದಿ ಭೇಟಿ ಪರಿಶೀಲಿಸಿದರು.

ಇಒ ಸುನಿಲ್‌ಕುಮಾರ್ ಮಾತನಾಡಿ, ಈ ಜಾಗದಲ್ಲಿ ನಿವೇಶನ ರಹಿತರಿಗೆ ಮನೆ ಕಟ್ಟಿಕೊಳ್ಳಲು ಸರ್ವೇ ಆಗಿದೆ. ಸ್ಕೆಚ್ ಬಾಕಿ ಇದೆ. ಜಾಗ ಕೊಡಲು ಗ್ರಾಮ ಪಂಚಾಯಿತಿ ತೀರ್ಮಾನಿಸಿದೆ. ಇಂದು ನೀವು ಟೆಂಟ್ ಹಾಕಿದರೆ ನಾಳೆ ಇನ್ನೊಂದು ಸಮುದಾಯದವರು ಟೆಂಟ್ ಹಾಕ್ತಾರೆ. ಟೆಂಟ್ ತೆರವುಗೊಳಿಸಿ ಎಂದರು. ಇದಕ್ಕೆ ಒಪ್ಪದ ದಲಿತ ಮುಖಂಡರು ನಮ್ಮ ಸಮುದಾಯಕ್ಕೆ ನಿವೇಶನ ಕೊಡುವವರೆಗೆ ನಾವು ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದರು.

ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಯಾವುದೇ ಗ್ರಾಮ ಠಾಣಾ ಜಾಗವನ್ನು ಸರ್ಕಾರ ವಶಕ್ಕೆ ಪಡೆದು ಅದರಲ್ಲಿ ಸರ್ಕಾರಿ ಕಟ್ಟಡ ಅಥವಾ ನಿವೇಶನರಹಿತರಿಗೆ ನಿವೇಶನ ಕೊಡುವ ತೀರ್ಮಾನಕ್ಕೆ ಬರಬಹುದು. ಅದರಲ್ಲಿ ಗ್ರಾಮ ಪಂಚಾಯಿತಿಯ ನಿರ್ಣಯವೇ ಅಂತಿಮ. ಹೀಗಾಗಿ ಇನ್ನು 15 ದಿನದಲ್ಲಿ ತುರ್ತು ಗ್ರಾಮಸಭೆ ಕರೆದು ನಿವೇಶನರಹಿತರ ಪಟ್ಟಿ ಮಾಡಿ ಎಂದು ಪಿಡಿಒಗೆ ಸೂಚಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರಾಜಯ್ಯ ಮಾತನಾಡಿ, ಈ ಜಾಗದಲ್ಲಿ ದಲಿತ ಜನಾಂಗದ ಪೂರ್ವಿಕರು ವಾಸವಿದ್ದರಂತೆ. ಹಾಗಾಗಿ ನಮ್ಮ ಜನಾಂಗದವರಿಗೆ ಮಾತ್ರ ಮನೆ ಕಟ್ಡಿಕೊಳ್ಳಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಗೋವಿಂದರಾಜ್, ಪಿಡಿಒ ಪರಮೇಶ್, ಗ್ರಾ.ಪಂ. ಸದಸ್ಯರಾದ ಜಾನಕಿ ವೆಂಕಟರಾಮು, ಮಮತಾ ತಮ್ಮಯ್ಯ, ಕವಿತಾ,ನಾಗರಾಜ್, ದಲಿತ ಮುಖಂಡರಾದ ರಾಮು, ಜಯರಾಮು, ವೆಂಕಟೇಶ್, ವಿನೋದ, ಮಹಿಳೆಯರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ದಲಿತ ಸಮುದಾಯದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net