ಜಾತಿ ಸಮೀಕ್ಷೆಗೆ ಆಸಕ್ತಿ ತೋರದ ದಲಿತ ಸಮುದಾಯ : ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಬೇಸರ

budha vihara
Published on

ಮೈಸೂರು: ಎಲ್ಲದಕ್ಕೂ ಪರಿಹಾರ ಇದೆ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ನಮ್ಮ ಸಮುದಾಯ ಪರಿಹಾರದ ಕಡೆ ಸಾಗಬೇಕು ಎಂದು ಶ್ರೀ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.

ನಗರದ ವಿಶ್ವಮೈತ್ರಿ ಬುದ್ಧವಿಹಾರದಲ್ಲಿ ಶ್ರೀ ಜ್ಞಾನಸ್ವರೂಪಾನಂದ ಸ್ವಾಮೀಜಿ ಅವರ ಪ್ರಥಮ ವರ್ಷದ ಸನ್ಯಾಸ ದೀಕ್ಷಾ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸಮಾಜದ ಏಳಿಗೆಗಾಗಿ ಚಿಂತನ-ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರ ಈಗಾಗಲೇ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಅಂಗೀಕರಿಸಿದೆ. ಕೋಟ್ಯಾಂತರ ಹಣ ಖರ್ಚು ಮಾಡಿ ರಾಜ್ಯ ಸರ್ಕಾರ ಜಾಗೃತಿ ಮೂಡಿಸಿದರೂ ನಮ್ಮ ಸಮುದಾಯದವರು ಜಾತಿ ಹೆಸರು ನೋಂದಾಯಿಸಲು ಆಸಕ್ತಿ ತೋರಲಿಲ್ಲ. ನಮ್ಮ ಸಮುದಾಯದ 9.60 ಲಕ್ಷ ಜನರು ಜಾತಿಯನ್ನು ಬರೆಸಿಲ್ಲ. ಇದು ನಮ್ಮ ಸಮುದಾಯಕ್ಕೆ ಎಷ್ಟು ಅಪಾಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜದ ಹಿತ ಕಾಯಬೇಕಾದ ಮುಂಚೂಣಿ ನಾಯಕರು, ಸಮುದಾಯವನ್ನು ರಕ್ಷಿಸಬೇಕಾದವರೇ ಕೈಚಲ್ಲಿ ಕುಳಿತರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದುಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಿ ಎಂದು ಅಂಬೇಡ್ಕರ್ ನಮಗೆ ಕರೆ ನೀಡಿದ್ದಾರೆ. ನಾವು ಈಗ ಯಾವ ಹಂತದಲ್ಲಿ ದ್ದೇವೆ, ಯಾವ ಮಾರ್ಗದಲ್ಲಿ ಚಲಿಸುತ್ತಿದ್ದೇವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆರ್ಥಿಕ ಕ್ಷೇತ್ರದಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ. ಅಂಬೇಡ್ಕರ್ ಮಾರ್ಗದಲ್ಲಿ ಹೋದರೆ ಮಾತ್ರ ಇದಕ್ಕೆಲ್ಲ ಪರಿಹಾರ ದೊರೆಯಲು ಸಾಧ್ಯ. ಇದನ್ನು ಯಾರು ಗಮನಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಈ ಸಮಸ್ಯೆಗಳು ಉಂಟಾಗುತ್ತಿದೆ ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸಂವಿಧಾನ ಜಾರಿಯಾಗಿ 7 ದಶಕಗಳು ಕಳೆದರೂ ಸಂವಿಧಾನದ ಆಶಯಗಳು ಈಡೇರಿಲ್ಲ. ನಮಗೆ ಮೀಸಲಾತಿ ನೀಡಿದರೂ ಮತ್ತೊಂದೆಡೆ ಕಸಿದುಕೊಂಡಿದ್ದಾರೆ. ನಮ್ಮ ಸಮುದಾಯವನ್ನು ಮೇಲೆತ್ತಲು ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಸ್ವರೂಪಾನಂದ ಸ್ವಾಮೀಜಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net