

ಮಂಡ್ಯ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆಗಳಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಖಂಡರು ಬುಧವಾರ ಕಾರ್ಯಕರ್ತರ ಸಭೆ ನಡೆಸಿದರು.
ಪಟ್ಟಣದ ಹೊರವಲಯದ ಕಲ್ಯಾಣ ಮಂಟಪವೊಂದರಲ್ಲಿ ಎನ್‌ಡಿಎ ಮೈತ್ರಿಕೂಟದ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕೆ.ವಿ.ವೇಕಾನಂದ ಅವರ ಪರವಾಗಿ ನಡೆದ ಸಭೆ ನಡೆಯಿತು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ನಾಲ್ಕು ಅವಧಿಯಲ್ಲಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಮರಿತಿಬ್ಬೇಗೌಡ ಅವರು ಸದನದಲ್ಲಿ ಶಿಕ್ಷಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ದನಿ ಎತ್ತುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇರುವ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಕಳೆದ ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸಾವಿರಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡಿದ್ದವು. ಅದ್ದರಿಂದ ಎಲ್ಲ ಮತದಾರರು ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ನೀಡುವ ಪೆನ್ನಿನಿಂದಲೇ ಸಂಖ್ಯೆ ಬರೆಯುವ ಮೂಲಕ ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಂಸಾಗರ ರವಿ, ಉಪಾಧ್ಯಕ್ಷ ಸಿದ್ದಾಚಾರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ಬಿಜೆಪಿ ಮುಖಂಡರಾದ ಜಿ.ಮುನಿರಾಜು, ಅಶೋಕ್, ಕೃಷ್ಣ, ಶಿವಲಿಂಗಸ್ವಾಮಿ, ಶಕುಂತಲಾ ಮಲ್ಲಿಕ್, ಶಾಲಿನಿ ಪ್ರಸಾದ್, ಜೆಡಿಎಸ್ ಮುಖಂಡರಾದ ಯತ್ತಂಬಾಡಿ ಪುಟ್ಟರಾಮು, ಜಯಮ್ಮ ಸೇರಿದಂತೆ ಇತರರಿದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಸಭೆ : ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು. ಮರಿತಿಬ್ಬೇಗೌಡ ಅವರು ಮೂಲ ಮಳವಳ್ಳಿಯವರೇ ಆಗಿರುವುದರಿಂದ ಹೆಚ್ಚಿನ ಮತಗಳು ಇಲ್ಲಿಂದಲೇ ಬರಬೇಕು ಎಂದು ತಿಳಿಸಿದರು. ಪ್ರತಿ ಗ್ರಾಪಂ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ಭೇಟಿ ಕೊಟ್ಟು ಶಿಕ್ಷಕರ ಕುಂದು ಕೊರತೆಗಳಿಗೆ ಸ್ಪಂದಿಸುವ ಮರಿ ತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ಕೊಟ್ಟು ಗೆಲ್ಲಿಸುವಂತೆ ಶಿಕ್ಷಕರನ್ನು ಮನವೊಲಿಸುವಂತೆ ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಪರಿಷತ್ ಚುನಾವಣೆ ಸಂಬಂಧ ಮೇ 31 ರಂದು ಸಂಜೆ 4 ಗಂಟೆಗೆ ಬಸವನಪುರ ಬಳಿಯ ಸಮುದಾಯ ಭವನದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ಸಭೆಗೆ ಕರೆತರುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಟೌನ್ ಅಧ್ಯಕ್ಷ ದೊಡ್ಡಯ್ಯ, ತಾಪಂ ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಉಪಾಧ್ಯಕ್ಷ ಸಿ.ಮಾಧು, ಮುಖಂಡರಾದ ಕಲ್ಕುಣಿ ದೇವರಾಜು, ದೀಪು, ದಶರಥ, ಶಿವರಾಮು, ಕಿರಣ್‌ಶಂಕರ್ ಸೇರಿದಂತೆ ಇತರರಿದ್ದರು.