

ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಹತ್ಯೆ ಮಾಡವ ಬಗ್ಗೆ ಸಂಚು ರೂಪಿಸಿ ಬಳಿಕ, ಅದರಿಂದ ಹಿಂದೆ ಸರಿದ ವ್ಯಕ್ತಿಯೊಬ್ಬ ಈ ಬಗ್ಗೆ ಬಜಪೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಉಡುಪಿ ಮೂಲದ ಸುದೀಪ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ
ದೂರುದಾರ ಬೆಳ್ತಂಗಡಿ ಮೂಲದ ಅಭಿಷೇಕ್ ಹಾಗೂ ಉಡುಪಿಯ ಸುದೀಪ್ ಸುಮಾರು ಒಂದೂವರೆ ವರ್ಷದಿಂದ ಪರಿಚಿತರು. ಹತ್ಯೆಯಾಗಿರುವ ಸುಹಾಸ್ ಶೆಟ್ಟಿ ಇಬ್ಬರಿಗೂ ಪರಿಚಿತನಾಗಿದ್ದ. ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಈ ಇಬ್ಬರೂ ಪ್ರತಿಕಾರದ ಬಗ್ಗೆ ಮಾತನಾಡಿಕೊಂಡಿದ್ದು, ಸಮಯ ಬಂದಾಗ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡನೇಕು ಎಂದು ಹೇಳಿಕೊಂಡಿದ್ದರು.ನಾಲ್ಕು ತಿಂಗಳ ಹಿಂದೆ ಅಭಿಷೇಕ್ ನನ್ನು ಪ್ರತಿಕಾರದ ಬಗ್ಗೆ ಮಾತನಾಡಲು ಇದೆ ಸುದೀಪ್ ಉಡುಪಿ ಕರೆಸಿಕೊಂಡಿದ್ದ. ಅದರಂತೆ ಸ್ನೇಹಿತ ಕೀರ್ತನ್ ಜತೆ ಅಭಿಷೇಕ್ ಉಡುಪಿಗೆ ಹೋಗಿದ್ದ. ಅಲ್ಲಿ ಸುದೀಪ್ ಹೊಟೇಲೊಂದರಲ್ಲಿ ಮಹೇಶ್ ಎಂಬಾತನನ್ನು ಕರೆದುಕೊಂಡು ಬಂದು ಪರಿಚಯಿಸಿದ್ದಾನೆ. ಆತ ನೀವು ಪ್ರತಿಕಾರದ ಹತ್ಯೆಗೆ ಯೋಜನೆ ರೂಪಿಸಿ, ನಾನು ನನ್ನ ಬೆಂಬಲ ಇದೆ ಎಂದಿದ್ದ. ಕೆಲವು ದಿನಗಳ ಬಳಿಕ ಸುದೀಪ್ ಕರೆಮಾಡಿ ಕಾರ್ಕಳಕ್ಕೆ ಬರಲು ಹೇಳಿದ್ದಾನೆ. ಅಲ್ಲಿ ಈ ಡೀಲ್ ಮಾಡಿದರೆ 24 ಲಕ್ಷ ರೂ. ನೀಡುತ್ತೇನೆ. ಜತೆಗೆ ಜೈಲಿನಲ್ಲಿರುವಾಗ ತಿಂಗಳಿಗೆ 5 ಸಾವಿರ ರೂ. ದಿನಸಿ ಮನೆಗೆ ತಲುಪಿಸುತ್ತೇನೆ ಮತ್ತು ಮನೆ ಖರ್ಚಿಗೆ 15 ಸಾವಿರ ರೂ. ನೀಡುತ್ತೇನೆ ಎಂದಿದ್ದ. ಆಗ ಇನ್ನೊಬ್ಬ ವ್ಯಕ್ತಿಯೂ ಸುದೀಪ್ ಜತೆಗಿದ್ದ.ಕೆಲವು ದಿನಗಳ ಬಳಿಕ ಸುದೀಪ್, ಅಭಿಷೇಕ್ ನ ಮೊಬೈಲ್ ಗೆ ಬಜಪೆ ಕಿನ್ನಿಪದವಿನ ವ್ಯಕ್ತಿಯ ಫೋಟೋ ಕಳುಹಿಸಿ, ಆತನ ಚಲನವಲನದ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾನೆ.ಫೋಟೋದಲ್ಲಿರುವಾತ ಹಿಂದೂ ಸಂಘಟನೆಯವರನ್ನು ಕೊಲೆ ಮಾಡಿದ ವ್ಯಕ್ತಿ ಎಂದು ತಿಳಿಸಿದ್ದಾನೆ. ಅಭಿಷೇಕ್ ಮತ್ತು ಕೀರ್ತನ್ ಸೇರಿ ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕಾರಿನ ಡೀಸೆಲ್ ಗೆ ಸುದೀಪ್ 2 ಸಾವಿರ ರೂ. ಹಣವನ್ನೂ ಕಳುಹಿಸಿದ್ದ. ಅಭಿಷೇಕ್ ತನ್ನ ಹಳೆ ಸ್ನೇಹಿತ ಚಿಂತನ್ ಗುಂಡ್ಯ ಎಂಬಾತನ ಸಂಪರ್ಕದಲ್ಲಿದ್ದು, ಆತ ಹಣ ನೀಡಿದಲ್ಲಿ ತಾನೂ ಸಿದ್ಧನಿರುವುದಾಗಿ ತಿಳಿಸಿದ್ದಾನೆ. ಆದರಂತೆ ಅಭಿಷೇಕ್ ತನ್ನ ಮನೆಯಲ್ಲಿದ್ದ 2 ತಲವಾರುಗಳನ್ನು ಸಿದ್ಧಪಡಿಸಿಕೊಂಡಿದ್ದ. ಸುದೀಪ್ ಕೂಡಾ ಕೃತ್ಯವನ್ನು ಬೇಗ ಪೂರ್ಣಗೊಳಿಸಲು ಒತ್ತಾಯಿಸಿದ್ದ.
ಹೆಂಡತಿಯ ಹೆರಿಗೆ ವೇಳೆ ಮನಪರಿವರ್ತನೆ
ಈ ನಡುವೆ ಅಭಿಷೇಕ್ ಹೆಂಡತಿಗೆ ಹೆರಿಗೆಯಾಗಿದ್ದು, ಇದರಿಂದ ಮನಪರಿವರ್ತನೆಗೊಂಡ ಆ ತನ್ನ ಮೇಲೆ ಕೇಸು ಆಗಬಹುದು ಎನ್ನುವ ಭಯದಿಂದ ಪ್ರಕರಣದಿಂದ ಹಿಂದೆ ಸರಿದಿದ್ದಾನೆ. ಇದನ್ನು ಕೀರ್ತನ್ ಹಾಗೂ ಚಿಂತನ್ ಗೂ ತಿಳಿಸಿದ್ದಾನೆ. ಸುದೀಪ್ ಮತ್ತು ಮಹೇಶ್ ಕ್ರಿಮಿನಲ್ ಹಿನ್ನೆಲೆಯವರಾದ ಕಾರಣ ತಡವಾಗಿ ಈ ಬಗ್ಗೆ ದೂರು ನೀಡಿದ್ದು, ಸುದೀಪ್ ಜತೆ ಮಾಡಿದ ವಾಟ್ಸ್ ಆ್ಯಪ್ ಚಾಟ್ ಸ್ಕ್ರೀನ್ ಶಾಟ್ ಗಳು ಮತ್ತು ಚಿಂತನ್ ಮತ್ತು ಕೀರ್ತನ್ ಜತೆ ಮಾಡಿದ ವಾಟ್ಸಾಪ್ ಚಾಟ್ ಮೊಬೈಲ್ ನಲ್ಲಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಿಸಿಬಿ ಪೊಲೀಸರಿಂದ ತನಿಖೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪ್ರಾಥಮಿಕವಾಗಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಬಳಿಕ ತನಿಖೆ ನಡೆಸಿ ಪ್ರಕರಣದ ವಾಸ್ತವಾಂಶಗಳನ್ನು ಪತ್ತೆಹಚ್ಚುವುದು ಹಾಗೂ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತನಿಖಾಧಿಕಾರಿಗಳ ಕರ್ತವ್ಯ. ಸಿಸಿಬಿ ತಂಡ ತನಿಖೆ ನಡೆಸುತ್ತಿದ್ದು, ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.