ಫಲ್ಗುಣಿ ನದಿಗೆ ಸೇರುತಿದೆ ಪಾಲಿಕೆ ಕೊಳಚೆ ನೀರು!

ದುರ್ನಾತದ ಜೊತೆ ಸೊಳ್ಳೆ ಕಾಟ, ಸಾಂಕ್ರಾಮಿಕ ರೋಗ ಭೀತಿ
Corporation sewage flowing into the Phalguni River!
Foul stench, mosquito menace, and fear of infectious diseases.
ಪಚ್ಚನಾಡಿ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ಸಂಸ್ಕರಿಸದ ಕೊಳಚೆ ನೀರು ಫಲ್ಗುಣಿ ನದಿಗೆ ಸೇರುತಿದೆ.
Published on

ವಿಜಯವಾಣಿ ವಿಶೇಷ

ಮನೆಯಿಂದ ಹೊರ ಬಂದರೆ ಸಾಕು ಉಸಿರುಗಟ್ಟಿಸುವ ದುರ್ನಾತ. ಎಲ್ಲೆಡೆ ದೊಡ್ಡ ಗಾತ್ರದ ಸೊಳ್ಳೆಗಳ ಕಾಟ. ಗದ್ದೆ, ತೋಟಗಳಿಗೆ ನುಗ್ಗುತಿದೆ ಕೊಳಚೆ. ಬಾವಿ, ಕೆರೆಯ ನೀರು ಕಲುಷಿತ. ಸಾಂಕ್ರಾಮಿಕ ರೋಗ ಭೀತಿ...

ಇದು ಮಂಗಳೂರು ಮಹಾನಗರ ಪಾಲಿಕೆಯ ಗಡಿಯಲ್ಲೇ ಇರುವ ಮೂಡುಶೆಡ್ಡೆ-ಮರವೂರು ಪಡುಶೆಡ್ಡೆ ಕುದ್ರು ಪ್ರದೇಶದ ನಿವಾಸಿಗಳ ನಿತ್ಯದ ಗೋಳು.

ಮೂಡುಶೆಡ್ಡೆಯ ಪಚ್ಚನಾಡಿಯಲ್ಲಿರುವ 8.75 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ರಾತ್ರಿ ವೇಳೆ ಹೊರ ಬಿಡಲಾಗುತ್ತಿದೆ. ಇದರಿಂದ ಗ್ರಾಮದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಈ ಹಿಂದೆಯೂ ಇದೇ ರೀತಿಯಲ್ಲಿ ತ್ಯಾಜ್ಯ ನೀರು ಡ್ಯಾಂ ಸೇರುತ್ತಿತ್ತು. ಆಗ ಪಾಲಿಕೆ ಆಯುಕ್ತರಾಗಿದ್ದ ಅಕ್ಷಿ ಶ್ರೀಧರ್ ಅವರು ಪೈಪ್ ಅಳವಡಿಸಿ ಡ್ಯಾಂ ಬಿಟ್ಟು ಕೆಳಗಡೆ ಪ್ರದೇಶಕ್ಕೆ ಬಿಡುವಂತೆ ಸೂಚಿಸಿದ ಮೇರೆಗೆ ಪೈಪ್ ಅಳವಡಿಕೆ ಮಾಡಲಾಗಿತ್ತು. ಆದರೆ ಈಗ ಆ ಪೈಪ್‌ಲೈನ್ ಅಲ್ಲಲ್ಲಿ ಒಡೆದು ಸೋರುತ್ತಿದ್ದು, ಕೊಳಚೆ ನೀರು ಸ್ಥಳೀಯರ ಗದ್ದೆ, ಕೃಷಿ ತೋಟ ಹಾಗೂ ಕುಡಿಯುವ ನೀರಿನ ಬಾವಿಗಳಿಗೆ ಸೇರುತ್ತಿದೆ. ಪರಿಣಾಮ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಈ ನೀರು ಮರವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಡ್ಯಾಂನ ಕೆಳಭಾಗಕ್ಕೆ ಸೇರುತ್ತಿದೆ.

ಕಪ್ಪಾದ ಫಲ್ಗುಣಿ, ಬಿಳಿ ನೊರೆ!

ಕಲುಷಿತ ನೀರು ಫಲ್ಗುಣಿ ನದಿಗೆ ಸೇರುತ್ತಿರುವ ಪರಿಣಾಮ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಅಲ್ಲಲ್ಲಿ ಬಿಳಿ ನೊರೆಯೊಂದಿಗೆ ಹರಿಯುತ್ತಿದೆ. ನೀರಿನ ದುರ್ವಾಸನೆಯಿಂದಾಗಿ ಪರಿಸರದಲ್ಲಿ ವಾಸಿಸುವುದೇ ಕಷ್ಟವಾಗಿದೆ. ಸಂಜೆಯಾಗುತ್ತಿದ್ದಂತೆ ದುರ್ನಾತ ಮತ್ತಷ್ಟು ತೀವ್ರವಾಗುತ್ತಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಪರಿಣಾಮ ಮಕ್ಕಳು, ವೃದ್ಧರು ಸೇರಿದಂತೆ ನಿವಾಸಿಗಳು ಆತಂಕದಲ್ಲಿದ್ದಾರೆ.

2 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಠುಸ್

ಈ ಹಿಂದೆ ಎಸ್‌ಟಿಪಿಯಿಂದ ಹೊರಬರುವ ನೀರನ್ನು ನೇರವಾಗಿ ತೋಡಿಗೆ ಬಿಡಲಾಗುತ್ತಿತ್ತು. ಈ ನೀರು 11 ಗ್ರಾಮಗಳ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಮರವೂರು ಡ್ಯಾಂ ಕಡೆಗೆ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಸ್ಥಳೀಯರ ಆಕ್ರೋಶದ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿ, ಕಲುಷಿತ ನೀರನ್ನು ಡ್ಯಾಂನ ಕೆಳಭಾಗಕ್ಕೆ ಹರಿಸುವ ವ್ಯವಸ್ಥೆ ಮಾಡಿತ್ತು. ಆದರೆ ಇದೀಗ ಇದೇ ಪೈಪ್‌ಲೈನ್ ಅಲ್ಲಲ್ಲಿ ಒಡೆದು ಹೋಗಿದ್ದು, ಕಲುಷಿತ ನೀರು ಸೋರಿಕೆಯಾಗುತ್ತಿದೆ.

ಪಚ್ಚನಾಡಿ ಎಸ್‌ಟಿಪಿಯಿಂದ ರಾತ್ರಿ ವೇಳೆ ಸಂಸ್ಕರಿಸದೆ ಕೊಳಚೆ ನೀರು ಹೊರ ಬಿಡಲಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ವಿಪರೀತ ದುರ್ನಾತ ಬೀರುತ್ತಿದೆ. ಸೊಳ್ಳೆ ಕಾಟವೂ ಹೆಚ್ಚಾಗಿದೆ. ನೀರು ಹರಿದು ಬಂದು ಬಹುಗ್ರಾಮ ಕುಡಿಯುವ ನೀರಿನ ಮೂಲವಾಗಿರುವ ಮರವೂರು ಡ್ಯಾಂಗೂ ಸೇರುತ್ತಿದ್ದು, 11 ಗ್ರಾಮಗಳ ಜನರು ಈ ನೀರು ಕುಡಿಯುತ್ತಿದ್ದಾರೆ. ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು.

ಕೇಶವ ಜಾರ

ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net