

ಮಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತಧಿಕಾರಿ (ವಿಎ) ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯಿತು.
ಮಂಗಳೂರು ನಗರದ 18 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 7384 ಅಭ್ಯರ್ಥಿಗಳು ಗ್ರಾಮ ಆಡಳಿತಧಿಕಾರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 5320 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಬೆಳಗ್ಗೆ ಸಾಮಾನ್ಯ ಜ್ಞಾನ, ಅಪರಾಹ್ನ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಪರೀಕ್ಷೆ ಸಂಯುಕ್ತವಾಗಿ ನಡೆಯಿತು.
ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ (ಓ ಎಂ ಆರ್ ಶೀಟ್) ಗಳನ್ನು ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಿಂದ ಬಿಗಿ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲೂ ಭದ್ರತೆ ಏರ್ಪಡಿಸಲಾಗಿತ್ತು. ಪ್ರತಿ ಅಭ್ಯರ್ಥಿಗಳ ಮುಖಚಹರೆಯನ್ನು ಆನ್ ಲೈನ್ ನಲ್ಲಿ ಸೆರೆ ಹಿಡಿದು, ಹೋಲಿಕೆಯಾದ ಬಳಿಕ ಅವರನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರಗಳ ಒಳಗೆ ಬಿಡಲಾಯಿತು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿತ್ತು.