ಗುಂಡೇಟು ತಗುಲಿ ಯುವಕ ನಿಗೂಢ ಸಾವು

ಆದೂರು ಪೊಲೀಸ್ ಠಾಣಾ ವ್ಯಾಪ್ತಿ
Published on: 

ಕಾಸರಗೋಡು: ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರು ಕಾಟಿಪಳ್ಳದಲ್ಲಿ ಗುಂಡೇಟು ತಗುಲಿದ ಸ್ಥಿತಿಯಲ್ಲಿ ಯುವಕನ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮುಳಿಯಾರು ಕಾಟಿಪಳ್ಳ ಸಮೀಪದ ಮಂಜಕಲ್ಲು ನಿವಾಸಿ ಮೊಯ್ದು ಅವರ ಪುತ್ರ ಹೈದರಲಿ (27) ಮೃತ. ಕಾಟಿಪಳ್ಳದ ಕೊಳವೆಬಾವಿ ಸಮೀಪದ ಮೈದಾನದಲ್ಲಿ ಹೈದರಲಿ ಸ್ಕೂಟರ್‌ನಿಂದ ಬಿದ್ದಿರುವುದನ್ನು ಸ್ನೇಹಿತ ಮುಹಮ್ಮದ್ ರಮೀಸ್ ನೋಡಿದ್ದಾರೆ. ತಕ್ಷಣ ಅಜೀರ್ ಅವರ ಕಾರಿನಲ್ಲಿ ಚೆರ್ಕಳದ ಖಾಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಮೈದಾನದಲ್ಲಿ ಸ್ಕೂಟರ್ ಬಿದ್ದಿದ್ದ ಸ್ಥಳದಿಂದ ಅನತಿ ದೂರದಲ್ಲಿ ಬಂದೂಕೊಂದು ಪತ್ತೆಯಾಗಿದೆ. ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಹೈದರಲಿ ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಕೆನ್ನೆಗೆ ಗುಂಡೇಟು ತಗುಲಿದ ಗಾಯಗಳಿದ್ದು, ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇಕಲ ಡಿವೈಎಸ್ಪಿ ಕೆ. ವಿನೋದ್ ಕುವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಲ್ಫ್‌ನಲ್ಲಿದ್ದ ಹೈದರಲಿ ಕೆಲವು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಆದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.