

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಂಜತ್ತಡ್ಕ ನಿವಾಸಿ ಸುರೇಂದ್ರನ್-ಪುಷ್ಪ ದಂಪತಿ ಪುತ್ರ ಸುನಿಲೇಶ್ (24)ಎಂಬುವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫ್ಯಾಬ್ರಿಕೇಶನ್ ನೌಕರನಾಗಿದ್ದರು. ಸೋಮವಾರ ಮನೆಯೊಳಗೆ ಮೃತದೇಹ ಪತ್ತೆಯಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಕುಸಿದು ಬಿದ್ದು ಇಚ್ಲಂಪಾಡಿ ದರ್ಬಾರ್ಕಟ್ಟೆ ನಿವಾಸಿ ಸುಂದರ (68)ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಕುಸಿದುಬಿದ್ದ ಅವರನ್ನು ಕೂಡಲೇ ಕುಂಬಳೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಕಾಸರಗೋಡು: ಕಾರು-ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಬೈಕ್ ಸವಾರ ಕೊಡ್ಲಮೊಗರು ಬಟ್ಟಿಪದವು ನಿವಾಸಿ ಉಮ್ಮರ್ ಎಂಬುವರ ಪುತ್ರ ಟಿ.ಮೊಹಮ್ಮದ್ (30) ಮೃತಪಟ್ಟಿದ್ದಾರೆ. ಸೋಮವಾರ ಸುಂಕದಕಟ್ಟೆ-ಆನೆಕಲ್ಲು ರಸ್ತೆಯ ಮೊರತ್ತಣೆ ಸಮೀಪದ ಬೇಕರಿ ಜಂಕ್ಷನ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೊಹಮ್ಮದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು: ಪತ್ನಿಯ ಮೇಲೆ ಹಲ್ಲೆ ನಡೆಸಿದ ದೂರಿನ ಮೇರೆಗೆ ಕಾಸರಗೋಡು ನಿವಾಸಿ ಮುಹಮ್ಮದ್ ಆಸಿಫ್ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೊಲೀಸರು ನರಹತ್ಯಾ ಯತ್ನದ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ. ಬಂಬ್ರಾಣ ಮೂಸ ಕ್ವಾಟ್ರರ್ಸ್ನ ಶಮೀಮಾ ಎಸ್. ದೂರು ನೀಡಿದ್ದಾರೆ. ಮುಹಮ್ಮದ್ ಜತೆಗೆ ತನ್ನನ್ನು ಕಳುಹಿಸಿಕೊಡಲು ತಂದೆ ಒಪ್ಪಿರಲಿಲ್ಲ. ಇದೇ ದ್ವೇಷದಿಂದ ತಾನು ಕೆಲಸ ನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್ಗೆ ಅ.20ರಂದು ಆಗಮಿಸಿದ ಮುಹಮ್ಮದ್ ತನಗೆ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಆಟ್ಟೆಂಗಾನ 7ನೇ ಮೈಲ್ನಿಂದ ನಾಪತ್ತೆಯಾಗಿದ್ದ ಸಫ್ವ ಮಂಜಿಲ್ನ ಸಫ್ವಾ (21) ತನ್ನ ಪ್ರಿಯಕರ, ಇರಿಯ ನಿವಾಸಿ ಅಕ್ಷಯ್ ಜತೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ. ಸಮಗ್ರ ಹೇಳಿಕೆ ದಾಖಲಿಸಿದ ಬಳಿಕ ಸಫ್ವಾಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಯುವತಿಯ ಇಚ್ಛಾನುಸಾರ ತೆರಳಲು ಆದೇಶಿಸಿದೆ. ಪ್ರಿಯಕರನೊಂದಿಗೆ ತೆರಳಲು ಸಫ್ವಾ ಇಚ್ಛಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಫ್ವಾ ನಾಪತ್ತೆಯಾಗಿದ್ದಾಳೆಂದು ತಾಯಿ ಅಂಬಲತ್ತರ ಠಾಣೆಗೆ ದೂರು ನೀಡಿದ್ದರು.
ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೈಕ ಸಮೀಪದ ಅರ್ಲಡ್ಕದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿ, ಜೂಜಿಗೆ ಬಳಸಿದ್ದ 1580 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಪೆರ್ಲ ನಲ್ಕ ನಿವಾಸಿ ದಿನೇಶ್ (42), ಕೋಟೂರು ಪಾತನಡ್ಕದ ರಾಜು (35), ನೆಕ್ರಾಜೆ ಅರ್ಲಡ್ಕದ ರಾಜೇಶ್ (40), ಬಾಬು (67), ಕುಂಬ್ಡಾಜೆ ಮವ್ವಾರಿನ ಸುಂದರ (60), ಮಾರ್ಪನಡ್ಕದ ಜಯೇಶ್ (45) ಮತ್ತು ನೆಟ್ಟಣಿಗೆ ಸಮೀಪದ ಮುರಳೀಧರ (53)ಬಂಧಿತರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.