

ಮಂಗಳೂರು : ಗ್ರಾಹಕ ಸೇವೆ ನೆಪದಲ್ಲಿ ಯುವತಿಯೋರ್ವಳಿಗೆ 2.37 ಲಕ್ಷ ರೂ. ವಂಚಿಸಿದ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಅ.6ರಂದು ರಾತ್ರಿ 11 ಗಂಟೆಯ ಸುಮಾರಿಗೆ ಪಿಜಿಯಲ್ಲಿ ಇನ್ ಸ್ಟಾ ಗ್ರಾಂ ನೋಡುತ್ತಿದ್ದಾಗ ಜಾಹೀರಾತು ಬಂದಿದ್ದು ಆ ಜಾಹೀರಾತನ್ನು ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಆ್ಯಪ್ ಓಪನ್ ಆಗಿ ಕಸ್ಟಮರ್ ಸರ್ವೀಸ್ ನ ಚಾಟ್ ಓಪನ್ ಆಗಿದೆ. ಅನಂತರ ಯಾರೋ ಅಪರಿಚಿತ ವ್ಯಕ್ತಿಯು 7069139803 ರಿಂದ ವಾಟ್ಸಾಪ್ ಕರೆ ಮಾಡಿ ಸರ್ವೀಸ್ ಬೇಕಾದ್ದಲ್ಲಿ ಆನ್ ಲೈನ್ ಪೇ ಮಾಡಿ ಬುಕ್ ಮಾಡಬೇಕೆಂದು ತಿಳಿಸಿದ. ಯುವತಿ ಇದರಿಂದ ಆಸಕ್ತಿಗೊಂಡು ಅ.7 ರಂದು ಅಪರಿಚಿತ ಕಳುಹಿಸಿದ ಸ್ಕಾೃನರ್ ಗೆ 3,000 ರೂ. ಗೂಗಲ್ ಪೇ ಮಾಡಿ ಬುಕ್ ಮಾಡಿದ್ದಾರೆ. ಅನಂತರ ಅಪರಿಚಿತರು ಪುನಃ ಕರೆ ಮಾಡಿ ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕೆಂದು ಹೇಳಿ 31,000 ರೂ. ಹಣ ವರ್ಗಾಯಿಸುವಂತೆ ತಿಳಿಸಿದ. ಅದರಂತೆ ಯುವತಿ ಅಪರಿಚಿತರು ಕಳುಹಿಸಿದ ಸ್ಕಾೃನರ್ ಗೆ ಹಣ ವರ್ಗಾಯಿಸಿದ್ದಾರೆ. ಅನಂತರ ಅದೇ ನಂಬರ್ ನಿಂದ ಕರೆ ಮಾಡಿದ ವ್ಯಕ್ತಿ ಸರ್ವಿಸ್ ಕನ್ಫರ್ಮೇಷನ್ ಚಾರ್ಜ್, ಪೊಲೀಸ್ ವೆರಿಫಿಕೇಷನ್ ಚಾರ್ಜ್, ವೈಟಿಂಗ್ ಚಾರ್ಜ್ ಗೆ ಹಣ ವರ್ಗಾಯಿಸಬೇಕು, ಹೀಗೆ ವರ್ಗಾಯಿಸಿದ ಹಣವನ್ನು ರಿಫಂಡ್ ಮಾಡಲಾಗುವುದು ಎಂಬುದಾಗಿ ತಿಳಿಸಿದ. ಇದನ್ನು ನಂಬಿದ ಯುವತಿ ಅಪರಿಚಿತ ತಿಳಿಸಿದಂತೆ ಅ.7ರಿಂದ ಅ.8ರವರೆಗೆ ಅವರು ಕಳುಹಿಸಿದ ಸ್ಕಾೃನರ್ ಗೆ 1,57,498 ರೂ. ಹಣವನ್ನು ಹಾಗೂ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 80,000 ರೂ. ಸೇರಿದಂತೆ ಒಟ್ಟು 2,37,498 ರೂ.ಗಳನ್ನು ವರ್ಗಾಯಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.