

ಮಂಗಳೂರು : ಸಾಮಾಜಿಕ ಜಾಲತಾಣ ಇನ್ ಸ್ಟಾ ಗ್ರಾಮ್ ಮೂಲಕ ಪರಿಚಯವಾಗಿದ್ದ ಡಾ.ಅಶ್ವಿನ್ ಶೆಟ್ಟಿ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯೊಬ್ಬ ಮಾಡೆಲಿಂಗ್, ಫೋಟೊ ಶೂಟ್ ಮಾಡಿಸುವುದಾಗಿ ಹೇಳಿ ಮೂಡುಬಿದಿರೆಯ ಯುವ ವೈದ್ಯೆಯೊಬ್ಬರನ್ನು ನಂಬಿಸಿ ಗೋಲ್ಡ್ ಬಿಸ್ಕಟ್, ಕಪ್ಪು ಹಣದ ಬ್ಯಾಗ್ ಇದೆಯೆಂದು ಹೇಳಿ 10.32 ಲಕ್ಷ ರೂ. ಮತ್ತು 32 ಗ್ರಾಂ ಚಿನ್ನಾಭರಣವನ್ನು ಪಡೆದು ವಂಚಿಸಿದ್ದಾನೆಂದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಲಾಗಿದೆ.
ತನ್ನನ್ನು ಅಶ್ವಿನ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯು ಮಾಡೆಲಿಂಗ್ ಹಾಗೂ ಫೋಟೋ ಶೂಟ್ ಮಾಡಿಸುವುದಾಗಿ ಹೇಳಿ ನಂಬಿಕೆ ಗಳಿಸಿಕೊಂಡಿದ್ದ. ಇದಲ್ಲದೆ, ಮಂಗಳೂರಿಗೆ ಹಡಗಿನ ಮೂಲಕ ಕಪ್ಪು ಹಣವಿರುವ ಬ್ಯಾಗ್‌ಗಳು ಬರುತ್ತಿದ್ದು, ಅವುಗಳನ್ನು ಪಡೆಯಲು ಮುಂಗಡ ಹಣ ಬೇಕೆಂದು ಹೇಳಿ ನಂಬಿಸಿದ್ದ. ಇದಕ್ಕಾಗಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ 1,70,000 ರೂ. ವರ್ಗಾಯಿಸಿಕೊಂಡಿದ್ದ.
ನಂತರ ಆದಾಯ ತೆರಿಗೆ ಸಮಸ್ಯೆ ಪರಿಹರಿಸುವ ನೆಪದಲ್ಲಿ ಗುರುತಿನ ಕಾರ್ಡ್, ಪಾನ್ ಕಾರ್ಡ್, ಫೋಟೋಗಳು ಮತ್ತು ಇತರ ಕೆವೈಸಿ ದಾಖಲೆಗಳನ್ನು ಪಡೆದಿದ್ದ. ಬಳಿಕ ಪ್ರವೀಣ್ ಶೆಟ್ಟಿ ಎಂಬ ವ್ಯಕ್ತಿಯೊಬ್ಬ 16 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ ವಿಸ್ಕಿ ಮತ್ತು ಬ್ರೀಜರ್ ಬಾಟಲಿಗಳನ್ನು ಪಡೆದುಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಸುಮಾರು 1,35,000 ರೂ. ಮೌಲ್ಯದ ಐ ಫೋನ್ ಪ್ರೋ ಮ್ಯಾಕ್ಸ್ ಮೊಬೈಲ್ ಫೋನ್ ಖರೀದಿಸಿ ನೀಡುವಂತೆ ಮಾಡಿದ್ದಾನೆ.
ಆ ಬಳಿಕ ಯುವ ವೈದ್ಯೆಯ ಫೋಟೋಗಳನ್ನು ಅಶ್ಲೀಲವಾಗಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಸಿದ್ದು ಮತ್ತೆ ಸೆ.17ರಂದು 50,000 ರೂ. ನಗದು ಹಾಗೂ ಸುಮಾರು 8 ಗ್ರಾಂ ಚಿನ್ನದ ಬ್ರಾಸ್ಲೈಟ್ ಪಡೆದುಕೊಂಡಿದ್ದಾನೆ. ಇದಲ್ಲದೆ, ಸೆ.22ರಂದು 8,00,000 ರೂ. ನಗದು ಹಣವನ್ನು ಚಾಲಕ ಸಂದೀಪ್ ಕೋಟ್ಯಾನ್ ಮೂಲಕ ಉಡುಪಿಯ ಕಲ್ಯಾಣ್ ಜ್ಯುವೆಲ್ಲರ್ಸ್ ಬಳಿ ಪಡೆದುಕೊಂಡಿದ್ದಾಗಿ ಆರೋಪಿಸಲಾಗಿದೆ.
ಹೀಗೆ ಹಲವು ರೀತಿಯಲ್ಲಿ ಅಶ್ವಿನ್ ಎಂಬ ಅಪರಿಚಿತ ವ್ಯಕ್ತಿ ಮಾಡೆಲಿಂಗ್, ಕಪ್ಪು ಹಣ, ಆದಾಯ ತೆರಿಗೆ ಹಾಗೂ ಬ್ಯಾಂಕ್ ಖಾತೆ ತೆರೆಯುವ ನೆಪದಲ್ಲಿ ದೂರುದಾರರನ್ನು ವಂಚಿಸಿದ್ದು, ಒಟ್ಟು ಸುಮಾರು 10,20,000 ರೂ., ಸುಮಾರು 32 ಗ್ರಾಂ ಚಿನ್ನಾಭರಣ ಪಡೆದಿದ್ದಾನೆ. 1,35,000 ರೂ. ಮೌಲ್ಯದ ಮೊಬೈಲ್ ಫೋನ್ ಸೇರಿದಂತೆ ಒಟ್ಟು 15,35,000 ರೂ. ಮೌಲ್ಯದ ಸೊತ್ತುಗಳನ್ನು ಪಡೆದುಕೊಂಡಿದ್ದಾನೆ. ಅಲ್ಲದೆ, ವೈದ್ಯೆ ಯುವತಿಯ ವೈಯಕ್ತಿಕ ದಾಖಲೆಗಳು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿ ಮಾನಹಾನಿ ಮಾಡುವುದಾಗಿ ಬೆದರಿಸಿದ್ದಾಗಿ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.