ಯತೀಂದ್ರರೇ ನಮ್ಮ ಹೈಕಮಾಂಡ್ ಮಂಗಳೂರಿನಲ್ಲಿ ಡಿಕೆಶಿ ಹೇಳಿಕೆ

ಡಿ.ಕೆ. ಶಿವಕುಮಾರ್ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ
ಡಿ.ಕೆ. ಶಿವಕುಮಾರ್ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ
Published on
ಮಂಗಳೂರು: ಯತೀಂದ್ರ ಸಿದ್ದರಾಮಯ್ಯರೇ ನಮ್ಮ ಹೈಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರೇ ಹೈಕಮಾಂಡ್ ಎಂಬಂತೆ ಹೇಳಿಕೆ ನೀಡಿರುವಾಗ ಅವರನ್ನೇ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಮುಂದಿನ ಐದು ವರ್ಷಗಳಿಗೆ ಸಿದ್ದರಾಮಯ್ಯರೇ ಸಿಎಂ ಎಂದು ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಯಾವುದೇ ಊಹಾಪೋಹ ಇಲ್ಲ ಎಂಬ ಯತೀಂದ್ರ ಹೇಳಿಕೆಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ನೂರು ಕಚೇರಿಗಳಿಗೆ ಶಂಕುಸ್ಥಾಪನೆ
ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ. ಎಐಸಿಸಿಯವರು ದಿನಾಂಕ ಕೊಡಲಿ, ಬಿಡಲಿ ನಾನಂತೂ ಎಲ್ಲಾ ಸಿದ್ಧತೆ ಮಾಡಿಕೊಂಡು ಪ್ರಾರಂಭ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುತ್ತಿದ್ದೇನೆ ಎಂದರು.
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸಲ್ಮಾನರನ್ನು ಕರೆದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲಾ ಜಾತಿ, ಧರ್ಮದವರು ಬೇಕು. ನಾವು ಜಾತಿ ಹಾಗೂ ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಸಿದ್ಧಾಂತ. ಯಾರೋ ಅಸೂಯೆ ಇರುವವರು ಈ ರೀತಿ ಮಾಡುತ್ತಾರೆ ಎಂದರು.
ಶಾಸಕ ಬಸವರಾಜು ಅವರು ಅಧಿಕಾರ ಒಪ್ಪಂದದ ಬಗ್ಗೆ ಸ್ಪಷ್ಟನೆ ಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಬಸವರಾಜು, ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏನೇ ಪ್ರತಿಕ್ರಿಯೆ ನೀಡುವುದಿದ್ದರೂ ದೆಹಲಿಯವರು ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದರು.
ಪೂಜಾರಿ ಮನೆಗೆ ಭೇಟಿ: ಡಿ.ಕೆ. ಶಿವಕುಮಾರ್ ಪುತ್ತೂರುಗೆ ತೆರಳುವಾಗ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ಅವರ ಯೋಗ ಕ್ಷೇಮ ವಿಚಾರಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಬಿ.ರಮಾನಾಥ ರೈ, ಪದ್ಮರಾಜ್ ಆರ್., ಇನಾಯತ್ ಆಲಿ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net