

ಕಾಸರಗೋಡು: ಸಮಾಜದ ಕಲ್ಮಶಗಳನ್ನು ತೊಡೆದು ಹಾಕುವುದರ ಜತೆಗೆ ನಿರಕ್ಷರಿಗಳನ್ನೂ ಬೌದ್ಧಿಕ ವಿಕಾಸದತ್ತ ಕೊಂಡೊಯ್ಯುವ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಮಾಧ್ಯಮವಾಗಿದೆ. ಅಂತರಂಗವನ್ನು ಶುದ್ಧಗೊಳಿಸುವ ಕಲೆಗಳ ಸಾಲಿನಲ್ಲಿ ಗಂಡುಮೆಟ್ಟಿನ ಕಲೆ ಯಕ್ಷಗಾನ ಮುಂಚೂಣಿಯಲ್ಲಿದೆ ಎಂದು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೂಡ್ಲು ಸುಬ್ರಾಯ ಶ್ಯಾನುಭಾಗ್ ವೇದಿಕೆಯಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವ ’ರಜತರಂಗ’ದ ಸಮಾರೋಪ ಸವಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಜತರಂಗ ಸಮಿತಿ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಪಂ ಅಧ್ಯಕ್ಷ ಸುಜ್ಞಾನಿ ಶ್ಯಾನುಭಾಗ್, ಸದಸ್ಯೆ ಪುಷ್ಪಾ, ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭಾಗ್, ಹಿರಿಯ ಭಾಗವತ ಪುತ್ತಿಗೆ ರುರಾಮ ಹೊಳ್ಳ, ಐಎಂಎ ಜಿಲ್ಲಾ ಸಂಚಾಲಕ ಡಾ.ಖಾಸಿಂ, ಧಾರ್ಮಿಕ ಮುಂದಾಳು ವಾಸುದೇವ ಹೊಳ್ಳ ಮಧೂರು, ಹಿರಿಯ ಭಾಗವತ ತಲ್ಪನಾಜೆ ವೆಂಕಟರಮಣ ಭಟ್, ಕೆ.ಸತ್ಯನಾರಾಯಣ ತಂತ್ರಿ, ಯುವ ಉದ್ಯಮಿ ಪವನ್ ಕೆ.ಬಿ., ಪುರುಷೋತ್ತಮ ಕಾವುಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಷ ಹಾಗೂ ಹಿರಿಯ ನಾಟ್ಯಾಚಾರ್ಯ ಕಾವು ಕಣ್ಣ ಅವರ ಸಂಸ್ಮರಣಾ ಭಾಷಣವನ್ನು ನಾ.ಕಾರಂತ ಪೆರಾಜೆ ಮತ್ತು ಜಗದೀಶ ಕೂಡ್ಲು ನಡೆಸಿಕೊಟ್ಟರು. ಯಕ್ಷಗಾನ ಕೇಂದ್ರದಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕುತ್ಯಾಳ ಕ್ಷೇತ್ರದಲ್ಲಿ ನಾಟ್ಯ ಕಲಿತವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕೇಂದ್ರದ ಸದಸ್ಯರಿಂದ ಪೂರ್ವರಂಗ ನಡೆಯಿತು. ಕಿಶೋರ್ ಕೂಡ್ಲು ಸ್ವಾಗತಿಸಿದರು. ಹರಿನಾರಾಯಣ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಆಕಾಶ್ ಕೂಡ್ಲು ವಂದಿಸಿದರು.