

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆಯಲ್ಲಿ ಬುಧವಾರ ಡಿಬಿಎಲ್ ಸಂಸ್ಥೆ ರಸ್ತೆ ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ಡಿಬಿಎಲ್ ಗುತ್ತಿಗೆ ಸಂಸ್ಥೆಯ ವಾಹನ ಕಾರ್ಮಿಕ ರಾಜಸ್ಥಾನದ ಕೋಟ ನಿವಾಸಿ ರುದ್ರದೇವ್(30) ಎಂಬುವರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರ್ಮಿಕನ ಕಾಲು ಹಾಗೂ ಸೊಂಟದ ಭಾಗಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಬುಧವಾರ ಸಂಜೆ ಸ್ಕೂಟಿಯೊಂದು ಸ್ಕಿಡ್ ಆಗಿ ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದ ಇಬ್ಬರ ಪೈಕಿ ಪ್ರಶ್ವಿತ್ ಹೆಗ್ಡೆ(17) ಮೃತಪಟ್ಟಿದ್ದಾರೆ. ಕೋಟೆಬಾಗಿಲಿನ ಸುಧಾಕರ್ ಅವರ ಪುತ್ರ ಪ್ರಶ್ವಿತ್ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಘಟನೆಯಲ್ಲಿ ದೀಕ್ಷಿತ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡುಬಿದಿರೆ: ಇಲ್ಲಿನ ಹಿರಿಯ ನಾಗರಿಕರೊಬ್ಬರಿಗೆ ಕರೆ ಮಾಡಿ ಹಿರಿಯ ನಾಗರಿಕರ ಕಾರ್ಡ್ ನೀಡುವುದಾಗಿ ತಿಳಿಸಿ, ಒಟಿಪಿ ಹಂಚಿಕೊಳ್ಳುವಂತೆ ಹೇಳಿ ಖಾತೆಯಲ್ಲಿದ್ದ 1 ಲಕ್ಷ ರೂ.ಹಣವನ್ನು ಪಡೆದು ವಂಚಿಸಲಾಗಿದೆ. ಹಿರಿಯ ನಾಗರಿಕರೊಬ್ಬರಿಗೆ ಕರೆ ಮಾಡಿದ ಅಪರಿಚಿತರು ಹಿರಿಯ ನಾಗರಿಕರ ಕಾರ್ಡ್ ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆ ಹಿರಿಯ ನಾಗರಿಕರು ತಮ್ಮ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ ರೂ.ಹಣ ಪಡೆದು ವಂಚಿಸಲಾಗಿದೆ. ಈ ಕುರಿತು ಹಿರಿಯ ನಾಗರಿಕ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಡುಬಿದಿರೆ: ಶಿರ್ತಾಡಿ ಪರಿಸರದ ಸರ್ಕಾರಿ ಸ್ಥಳದಿಂದ ಮರಗಳ್ಳತನ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅರಣ್ಯ ಇಲಾಖಾಧಿಕಾರಿಗಳು ಧರ್ಮರಾಜ ಪೂವಣಿ, ಪೂರ್ಣಚಂದ್ರ ಶೆಟ್ಟಿ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೈವಸ್ಥಾನವೊಂದರ ಹೆಸರಲ್ಲಿ ಮರ ಕಡಿದು ಸಾಗಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸುದತ್ತ ಜೈನ್ ಶಿರ್ತಾಡಿ ಇತ್ತೀಚೆಗೆ ಆರೋಪಿಸಿದ್ದರು. ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.