ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಸಾವು

ಕೊಲೆ ಶಂಕೆ ಹಿನ್ನೆಲೆಯಲ್ಲಿ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
 ಸಂಜೀವ ಕುಮಾರ್
ಸಂಜೀವ ಕುಮಾರ್
Published on: 

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ಸರ್ಕಾರಿ ವಸತಿಗೃಹದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕೊಲೆ ಶಂಕೆ ಹಿನ್ನೆಲೆಯಲ್ಲಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಸುನೀತಾ ಮಹಾದೇವ್ ದೇಸಂಗಿ(34) ಮೃತರು. ಅವರ ಪತಿ ಸಂಜೀವ ಕುಮಾರ್(36) ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದವರಾಗಿದ್ದು, ವಗ್ಗದಲ್ಲಿ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುನೀತಾ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿದ್ದರು. ಹೆರಿಗೆ ರಜೆಯಲ್ಲಿದ್ದು, ಅ.4ರಂದು ವಗ್ಗಕ್ಕೆ ಆಗಮಿಸಿ ವಸತಿಗೃಹದಲ್ಲಿ ವಾಸವಿದ್ದರು.

ಸಂಬಳ ವಿಚಾರದಲ್ಲಿ ಸುನೀತಾ ಜತೆ ಸಂಜೀವ ಕುಮಾರ್ ಆಗಾಗ ತಕರಾರು ತೆಗೆಯುತ್ತಿದ್ದು, ಈ ಹಿಂದೆಯೂ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು. ಅ.22ರ ರಾತ್ರಿ ಸಹೋದರ ಅರುಣ್ ಮಹಾದೇವ್ ದೇಸಂಗಿ ಅವರಿಗೆ ಕರೆ ಮಾಡಿದ ಸುನೀತಾ, ಪತಿ ಹಣದ ವಿಚಾರದಲ್ಲಿ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿದ್ದಾರೆ, ತಕ್ಷಣ ಬರುವಂತೆ ಹೇಳಿದ್ದರು ಎನ್ನಲಾಗಿದೆ.

ಮರುದಿನ ಮುಂಜಾನೆ ಸಂಜೀವ ಕುಮಾರ್ ಮೊಬೈಲ್‌ನಿಂದ ಕರೆ ಬಂದಿದ್ದು, ಸುನೀತಾ ಮಂಚದಿಂದ ಬಿದ್ದು ಪ್ರಜ್ಞೆ ತಪ್ಪಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಲಾಗಿತ್ತು. ತಾಯಿ ಜತೆ ಆಸ್ಪತ್ರೆಗೆ ಬಂದ ಅರುಣ್ ಅವರಿಗೆ, ಮುಂಜಾನೆ 4.30ಕ್ಕೆ ಆಸ್ಪತ್ರೆಗೆ ಕರೆತಂದಾಗಲೇ ಸುನೀತಾ ಮೃತಪಟ್ಟಿದ್ದರು ಎಂಬ ವಿಚಾರ ತಿಳಿದುಬಂದಿದೆ.

ಕೊಲೆ ಶಂಕೆ

ಸಂಜೀವ್ ಕುಮಾರ್ ಸುನೀತಾ ಅವರನ್ನು ಮಾರಕಾಸದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ಸಹೋದರ ಅರುಣ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ಪರಿಶೀಲಿಸಿದಾಗ ಹಣೆ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಗಾಯ ಮತ್ತು ಊತ ಕಂಡುಬಂದಿದ್ದು, ಮೂಗು ಹಾಗೂ ಬಾಯಿಯಿಂದ ರಕ್ತ ಬಂದಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net