ಕಿಂಡಿ ಅಣೆಕಟ್ಟೆಯಲ್ಲಿ ಬತ್ತಿದ ನೀರು

ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿರುವ ಕಿಂಡಿ ಅಣೆಕಟ್ಟು.
ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿರುವ ಕಿಂಡಿ ಅಣೆಕಟ್ಟು.
Published on

ಪ್ರಮುಖ ಮುಖ್ಯಾಂಶಗಳು

  • ಮಳಲಿಯಲ್ಲಿ ವಿಳಂಬವಾಗಿ ಗೇಟ್ ಅಳವಡಿಕೆ
  • ಮರಳುಗಾರಿಕೆಗೆ ಸಹಾಯ ಆರೋಪ
ಧನಂಜಯ ಗುರುಪುರ
ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ ಕಿಂಡಿ ಅಣೆಕಟ್ಟೆಯಲ್ಲಿ ಈ ಬಾರಿ ಹಲಗೆ(ಕಬ್ಬಿಣದ ಗೇಟ್) ಅಳವಡಿಕೆ ವಿಳಂಬದಿಂದ ನೀರಿನ ಸಂಗ್ರಹ ಪ್ರಮಾಣ ತೀರಾ ಕುಸಿದಿದೆ. ಅಣೆಕಟ್ಟಿನ 500 ಮೀಟರ್ ಅಂತರದಲ್ಲಿ ಕಾನೂನುಬಾಹಿರ ಮರಳುಗಾರಿಕೆ ನಡೆದಿದ್ದು, ಅಕ್ರಮ ಮರಳುಗಾರಿಕೆಗೆ ಸಹಕರಿಸಲೆಂದೇ ಇಲಾಖೆ ಈ ವರ್ಷ ಅಣೆಕಟ್ಟಿಗೆ ತಡವಾಗಿ(ನವೆಂಬರ್‌ನಲ್ಲಿ) ಹಲಗೆ ಅಳವಡಿಸಿದೆ ಎಂದು ಸ್ಥಳೀಯರು ಮತ್ತು ಕೃಷಿಕರು ಆರೋಪಿಸಿದ್ದಾರೆ.
ಅಂದಾಜು 12.5 ಕೋ.ರೂ. ವೆಚ್ಚದ ಮಳಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 2018ರಲ್ಲಿ ಸಚಿವ ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದರು. 171.6 ಮೀಟರ್ ಉದ್ದದ 23 ಪಿಲ್ಲರ್ ಹೊಂದಿರುವ ಈ ಅಣೆಕಟ್ಟಿನಿಂದ ಗಂಜಿಮಠ ಗ್ರಾಪಂ, ಬಡಗಬೆಳ್ಳೂರು ಗ್ರಾಪಂ, ಕರಿಯಂಗಳ ಗ್ರಾಪಂ ಮತ್ತು ಮುತ್ತೂರು ಗ್ರಾಪಂ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ದೊರೆಯುತ್ತದೆ. ಜತೆಗೆ ಅಣೆಕಟ್ಟಿನಲ್ಲಿ ನೀರು ತುಂಬಿರುವಾಗ ಸುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ, ಬಾವಿಗಳಲ್ಲಿ ನೀರು ಸಾಕಷ್ಟು ಲಭ್ಯವಿರುತ್ತದೆ. ಅಂದರೆ, ಇದು ಸಾರ್ವಜನಿಕರಿಗೂ ಪ್ರಯೋಜನದ ಅಣೆಕಟ್ಟು ಆಗಿದೆ.
ನಿರ್ದಿಷ್ಟ ಅವಧಿಯಲ್ಲಿ ಅಣೆಕಟ್ಟಿಗೆ ಹಲಗೆ ಅಳವಡಿಸಿದರೆ ಹೆಚ್ಚು ನೀರು ಸಂಗ್ರಹವಾಗುತ್ತದೆ. ಈ ಬಾರಿ ಈ ಪ್ರಕ್ರಿಯೆ ವಿಳಂಬಗೊಳಿಸಿರುವ ಇಲಾಖೆ ನೀರಿನ ಕುಸಿತಕ್ಕೆ ಕಾರಣವಾಗಿದೆ. ಅಣೆಕಟ್ಟಿನ ಗೇಟ್‌ಗಳು ತಳಭಾಗದಲ್ಲಿ ಸರಿಯಾಗಿಲ್ಲ. ಹಾಗಾಗಿ ಅಡಿಯಲ್ಲಿ ನೀರು ಸೋರಿಕೆಯಾಗುತ್ತಿದೆ. 12 ಮೀಟರ್ ನೀರು ಸಂಗ್ರಹದ ಅಣೆಕಟ್ಟಿನಲ್ಲಿ ಈಗ 7 ಮೀಟರಿನಷ್ಟು ನೀರಿದೆ. ಶೀಘ್ರ ಕ್ರಮ ಕೈಗೊಳ್ಳದೆ ಹೋದಲ್ಲಿ ಬೇಸಗೆಯಲ್ಲಿ ನೀರಿನ ಪ್ರಮಾಣ ತಳ ಹಿಡಿಯಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅಣೆಕಟ್ಟಿನ ಗೇಟ್ ಸರಿಯಾಗಿ ಅಳವಡಿಸಿಲ್ಲ. ನೀರು ಸೋರಿಕೆಯಾಗಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏಕಾಏಕಿ ಕಡಿಮೆಯಾಗಿದೆ. ಗುತ್ತಿಗೆ ಸಂಸ್ಥೆಯ ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜನರಿಗೆ, ಕೃಷಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ.

ಮಳಲಿ ಕಿಂಡಿ ಅಣೆಕಟ್ಟಿಗೆ ಈ ಬಾರಿ ಹಲಗೆ ಅಳವಡಿಕೆ ಪ್ರಕ್ರಿಯೆ ವಿಳಂಬಗೊಳಿಸಲಾಗಿದೆ. ಇದರಲ್ಲಿ ಮರಳುಗಾರಿಕೆ ಮಾಡುವವರಿಗೆ ಸಹಕರಿಸುವ ಉದ್ದೇಶವೂ ಇರಬಹುದು. ಅಣೆಕಟ್ಟಿನಲ್ಲಿ ಈಗ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೃಷಿ ಉದ್ದೇಶಕ್ಕಾಗಿ ಅಣೆಕಟ್ಟು ನಿರ್ಮಿಸಿದ ಬಳಿಕ ಸುತ್ತಲ ಪ್ರದೇಶದ ಬಾವಿಗಳಲ್ಲಿ ಕೊನೆಯವರೆಗೂ ಸಾಕಷ್ಟು ನೀರು ಇದ್ದರೂ, ಈ ಬಾರಿ ಕ್ರಮೇಣ ನೀರು ಬತ್ತಲಾರಂಭಿಸಿದೆ. ಅಣೆಕಟ್ಟಿನಲ್ಲಿ ಸೋರಿಕೆ ತಡೆಗಟ್ಟಲು ಶೀಘ್ರ ಕ್ರಮ ಕೈಗೊಳ್ಳಬೇಕು. ಅಣೆಕಟ್ಟಿನ ಬಳಿ ಕಾನೂನುಬಾಹಿರ ಮರಳುಗಾರಿಕೆಗೆ ಅವಕಾಶ ನೀಡಕೂಡದು.

ಸಣ್ಣ ನೀರಾವರಿ ಇಲಾಖೆಯ ಮಂಗಳೂರು ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಳಲಿ ಕಿಂಡಿ ಅಣೆಕಟ್ಟೆ ನೀರು ಸೋರಿಕೆ ಚರ್ಚೆಯಾಗಿದೆ. ಗ್ರಾಮಸ್ಥರ ಸಮ್ಮುಖ ಈಗಾಗಲೇ ಅಣೆಕಟ್ಟೆ ಪರಿಶೀಲಿಸಲಾಗಿದೆ. ಈ ಬಾರಿ ಅಣೆಕಟ್ಟಿಗೆ ಹಲಗೆ ಅಳವಡಿಕೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಇದರಲ್ಲಿ ಮರಳುಗಾರಿಕೆಗೆ ಉಪಕಾರ ಮಾಡುವ ಉದ್ದೇಶವಿಲ್ಲ. ಒಂದು ವಾರದೊಳಗೆ ಮಳಲಿಯಲ್ಲಿ ಸಾರ್ವಜನಿಕರ ಸಮ್ಮುಖ ಸಭೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷ ಕಿಂಡಿ ಅಣೆಕಟ್ಟು ನೀರು ಬಳಕೆದಾರರ ಸಮಿತಿ ರಚನೆಯಾಗಲಿದೆ. ಸಮಿತಿ ಮೂಲಕ ಅಣೆಕಟ್ಟಿನ ಎಲ್ಲ ವಿಚಾರ ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net