ವಿಟ್ಲದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ VITTAL

ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಪೊಲೀಸರು ಇದ್ದರೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವುದು.
ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಪೊಲೀಸರು ಇದ್ದರೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನಿಯಮಗಳಿದ್ದರೂ ಪಾಲನೆಯಾಗುತ್ತಿಲ್ಲ
  • ಪೊಲೀಸರ ನಿರುತ್ಸಾಹ
ವಿಟ್ಲ: ವಿಟ್ಲ ಪೇಟೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳು ವಾಹನ ನಿಲುಗಡೆ ನಿಷೇಧಿತ ಸ್ಥಳವನ್ನು ನಿಗದಿ ಮಾಡಿ ದಶಕವಾದರೂ ಸಮಸ್ಯೆ ಸರಿಯಾಗಿಲ್ಲ. ಪಟ್ಟಣ ಪಂಚಾಯಿತಿ ಎರಡು ವರ್ಷಕ್ಕೊಮ್ಮೆ ಸಭೆಯನ್ನು ನಡೆಸಿ ಸಂಚಾರ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳುವುದು ಬಿಟ್ಟರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳ ಕಣ್ಣ ಮುಂದೆಯೇ ವಾಹನ ನಿಲುಗಡೆಯಾದರೂ, ಕಾನೂನು ಕ್ರಮ ಕೈಗೊಳ್ಳುವುದಿರಲಿ ಕನಿಷ್ಠ ಎಚ್ಚರಿಕೆಯನ್ನೂ ನೀಡುವುದಿಲ್ಲ. ಇದರಿಂದಾಗಿ ವಿಟ್ಲ ಪೇಟೆಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ವಿಟ್ಲ ಪೇಟೆಯ ನಾಲ್ಕು ರಸ್ತೆಗಳಲ್ಲಿ ಮಾರ್ಕಿಂಗ್ ಮಾಡಿ, ಬದಿಯಲ್ಲಿ ಫಲಕ ಅಳವಡಿಸಿ ನೋಪಾರ್ಕಿಂಗ್, ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರಿಗೆ ಬಸ್ ಹತ್ತಲು, ಇಳಿಯಲು ಅನುಕೂಲವಾಗಲೆಂದು ಅಗತ್ಯ ತಂಗುದಾಣ ನಿರ್ಮಿಸಲಾಗಿದೆ. ಹಳೇ ಬಸ್ ನಿಲ್ದಾಣದಲ್ಲೂ ನಿಗದಿತ ಬಸ್ ನಿಲುಗಡೆಗೆ ಸೂಚನೆ ನೀಡಲಾಗಿದೆ. ಆದರೆ ಇದೆಲ್ಲ ವ್ಯವಸ್ಥೆ ಮಾಡಿದ ಬಳಿಕವೂ ಪೊಲೀಸ್ ಇಲಾಖೆ ವಾಹನ ದಟ್ಟಣೆ ನಿಯಂತ್ರಣ ಮಾಡುವಲ್ಲಿ ನಿರುತ್ಸಾಹ ತೋರುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ನಿಷ್ಪ್ರಯೋಜಕ ಆಡಳಿತ: ಕಾನೂನು ಸುವ್ಯವಸ್ಥೆ ಸರಿಪಡಿಸುವಲ್ಲಿ ಮುಂಚೂಣಿಯಲ್ಲಿರಬೇಕಾದ ಪಟ್ಟಣ ಪಂಚಾಯಿತಿ ಒಮ್ಮೆ ಸಭೆ ನಡೆಸಿ ಮೌನಕ್ಕೆ ಶರಣಾಗಿದೆ. ಈಗ ಮತ್ತೆ ಬಸ್‌ಗಳು ನಿಲ್ದಾಣದ ಒಳಗೆ ಬರದೆ ರಸ್ತೆಯಲ್ಲೇ ತಿರುಗಿಸುವುದರಿಂದ ಸಮಸ್ಯೆ ಉಲ್ಬಣಿಸಿದೆ. ರಿಕ್ಷಾಗಳನ್ನು ರಸ್ತೆಯ ಎಲ್ಲೆಂದರಲ್ಲಿ ಪಾರ್ಕ್ ಮಾಡುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಆರಂಭ ಶೂರತ್ವವನ್ನು ಪ್ರದರ್ಶಿಸುವ ಪಟ್ಟಣ ಪಂಚಾಯಿತಿ ಈಗ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಕಾಸರಗೋಡು ರಸ್ತೆಯಲ್ಲಿ ಬಸ್ಸೊಂದು ತಿರುಗುವಾಗ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿರುವುದು.

ಪಪಂ ಕಾರ್ಯವೈಖರಿಗೆ ಜನರ ವಿರೋಧ

ಇತರ ಯಾವ ಪಂಚಾಯಿತಿಗಳಲ್ಲೂ ಇಲ್ಲದ ಏಕನಿವೇಶನ ಅಭಿವೃದ್ಧಿ ಶುಲ್ಕ, ಕಸ ಸಂಗ್ರಹಿಸದಿದ್ದರೂ ಶುಲ್ಕ ವಿಧಿಸುವ ವಿಟ್ಲ ಪಟ್ಟಣ ಪಂಚಾಯಿತಿ ಆಡಳಿತ ಸುಗಮ ಸಂಚಾರಕ್ಕೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆಲ ಸಮಯದ ಹಿಂದೆ ವಿವಿಧ ಸಭೆಗಳನ್ನು ನಡೆಸಿ ನಾಲ್ಕು ರಸ್ತೆಗಳಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಡಿಸಿ ಆದೇಶವನ್ನು ಕಟ್ಟುನಿಷ್ಟಾಗಿ ಅನುಷ್ಠಾನ ಮಾಡುವುದಾಗಿ ಹೇಳಿಕೆ ನೀಡಿದ್ದು ಬಿಟ್ಟರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಹಿಂದಿನಂತೆಯೇ ಎಲ್ಲೆಂದರಲ್ಲಿ ವಾಹನ ನಿಲುಗಡೆ, ರಸ್ತೆಯಲ್ಲೇ ನಿಲ್ಲುವ ಬಸ್‌ಗಳು, ನಾಲ್ಕು ಮಾರ್ಗದಲ್ಲೇ ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಕಾನೂನು ಪಾಲನೆ ಮಾಡುವವರಿಗೂ ಇದರಿಂದ ತೊಡಕಾಗುತ್ತಿದ್ದು ಪಟ್ಟಣ ಪಂಚಾಯಿತಿ ಆಡಳಿತವೇ ನಿಷ್ಪ್ರಯೋಜಕವಾಗಿ ಎಂದು ಸಾರ್ವಜನಿಕರು ತೆಗಳುವಂತಾಗಿದೆ.

ಕೈ ಕಟ್ಟಿ ನಿಲ್ಲುವ ಪೊಲೀಸರು

ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ನಿಲ್ಲುವುದನ್ನು ತಪ್ಪಿಸುವುದಕ್ಕೆ ಪೊಲೀಸ್, ಗೃಹರಕ್ಷಕ ದಳವನ್ನು ನಿಯೋಜಿಸಲಾಗಿದೆ. ಇವರು ಸ್ವಲ್ಪ ಹೊತ್ತು ರಸ್ತೆಯಲ್ಲಿದ್ದರೆ ನಂತರ ಕೈಕಟ್ಟಿ ನಿಲ್ಲುವುದು, ಮೊಬೈಲ್ ಕರೆಯಲ್ಲಿ ಕಾರ್ಯನಿರತರಾಗಿರುವುದೇ ಹೆಚ್ಚಾಗಿದೆ. ಬುಧವಾರ ರೇಷ್ಮೆ ಸಚಿವರು ವಿಟ್ಲಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಪೂರ್ವ ಭಾವಿಯಾಗಿ ಮಂಗಳವಾರ ಠಾಣೆಯ ಉಪನಿರೀಕ್ಷಕರೇ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸಿದರು. ಆದರೆ ಅವರ ಹಿಂಭಾಗದಲ್ಲೇ ರಿಕ್ಷಾದವರು ಜನರನ್ನು ಹತ್ತಿಸಿ, ಇಳಿಸಿ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಲಿಲ್ಲ.
"

ಜನ ಸಾಮಾನ್ಯರು ರಸ್ತೆಯಲ್ಲಿ ವಾಹನ ನಿಲ್ಲಿಸಿ ನಿಂತು ಹರಟೆ ಹೊಡೆದರೆ ಸರ್ಕಾರಿ ಕರ್ತವ್ಯಕ್ಕೆ ಅಡಿಯಾಗುತ್ತದೆ. ಹೆಲ್ಮೆಟ್ ಧರಿಸದ, ಸೀಟ್ ಬೆಲ್ಟ್ ಹಾಕದ ಬಡಪಾಯಿ ಸವಾರರಿಗೆ ಸಿಸಿ ಕ್ಯಾಮರಾ ಗಮನಿಸಿ ದಂಡ ವಿಽಸುವ ಇಲಾಖೆಯ ಅಧಿಕಾರಿಗಳು, ಕರ್ತವ್ಯ ನಿರ್ವಹಿಸದೆ ರಸ್ತೆಯ ಬದಿ ನಿಲ್ಲುವ ಇಲಾಖೆಯ ಸಿಬ್ಬಂದಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು.

— ಗಿರೀಶ್, ವಾಹನ ಸವಾರರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net