ಅಭಿವೃದ್ಧಿ ಶುಲ್ಕ ಹೆಚ್ಚಿಸದಂತೆ ಸದಸ್ಯರ ಪಟ್ಟು Vittal

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಾತನಾಡಿದರು. ಸಂಗೀತಾ, ಅಶೋಕ್, ಕರುಣಾಕರ, ಮನೋಜ್ ಇದ್ದರು.
ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಾತನಾಡಿದರು. ಸಂಗೀತಾ, ಅಶೋಕ್, ಕರುಣಾಕರ, ಮನೋಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ
  • ಇತರೆಡೆ ಇರುವಷ್ಟೇ ವಿಧಿಸಲು ಆಗ್ರಹ
ವಿಟ್ಲ: ಅಭಿವೃದ್ಧಿ ಶುಲ್ಕವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿದ್ದು ಜನರಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಅಭಿವೃದ್ಧಿ ಶುಲ್ಕವನ್ನು ಏರಿಸದಂತೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
೬ ಸೆಂಟ್ಸ್ ಜಾಗಕ್ಕೆ ಅಭಿವೃದ್ಧಿ ಶುಲ್ಕವಾಗಿ ೧.೪೫ ಲಕ್ಷ ರೂ. ವಿಧಿಸಲಾಗಿದೆ. ೩ ಲಕ್ಷ ರೂ.ವರೆಗೆ ಶುಲ್ಕ ಬಂದಿರುವ ದಾಖಲೆಯಿದೆ. ಜನರಿಗೆ ತೊಂದರೆಯಾಗುವಾಗ ಪಕ್ಷ, ಮತ, ಬಣ ಬಿಟ್ಟು ಮಾತಾಡಬೇಕು. ಎಲ್ಲವನ್ನೂ ಜಿಲ್ಲಾಧಿಕಾರಿಗೆ ಬರೆದು ಕ್ರಮ ತೆಗೆದುಕೊಳ್ಳುವುದು ಬೇಡ. ಬೈಲಾ ಮಾಡಿಯಾದರೂ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸದಸ್ಯರಾದ ಅಶ್ರಫ್ ಹಾಗೂ ರಹಿಮಾನ್ ನೆಲ್ಲಿಗುಡ್ಡೆ ಆಗ್ರಹಿಸಿದರು. ಉಳಿದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ತೆರಿಗೆ ಇದೆಯೂ ಅಷ್ಟನ್ನೇ ವಿಽಸಬೇಕೆಂದು ಪಟ್ಟುಹಿಡಿದರು.
ಪಂಚಲಿಂಗೇಶ್ವರ ಜಾತ್ರೆಯ ಸಂತೆ ವಿಚಾರದಲ್ಲಿ ಹೆಚ್ಚುವರಿ ಹಣ ಪಡೆದ ಕುರಿತು ದೂರು ಬಂದಿದೆ. ಟೆಂಡರ್ ಪಡೆದವರಿಗೆ ಪಟ್ಟಣ ಪಂಚಾಯಿತಿಯಿಂದ ನೋಟೀಸ್ ನೀಡಿದರೂ ಹಾಜರಾಗದ ಕಾರಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ಸಂತೆ ಅಂಗಡಿಯವರಿಗೆ ನ್ಯಾಯ ಒದಗಿಸುವ ಕಾರ್ಯವಾಗಬೇಕು. ಅಂಗಡಿಯವರಿಂದ ದಾಖಲೆಗಳನ್ನು ಪಡೆದು ಪೊಲೀಸ್ ದೂರು ನೀಡಬೇಕು. ಮುಂದೆ ಗುತ್ತಿಗೆ ಹಾಕದಂತೆ ಆತನನ್ನು ಬ್ಲಾಕ್ ಲಿಸ್ಟ್‌ಗೆ ಹಾಕಬೇಕೆಂದು ಸದಸ್ಯರೊಬ್ಬರು ಒತ್ತಾಯಿಸಿದರು.
ಬೆಲೆ ಇಲ್ಲದ ಮೇಲೆ ನಿರ್ಣಯ ಮಾಡುವುದೇಕೆ?: ತಿಂಗಳಿಗೊಮ್ಮೆ ಸಭೆ ನಡೆಸಿ ಸದಸ್ಯರೆಲ್ಲ ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡು ಸಭೆಯಲ್ಲಿ ನಿರ್ಣಯ ಮಾಡಲಾಗುತ್ತದೆ. ನಿರ್ಣಯಗಳಿಗೆ ಬೆಲೆ ಇಲ್ಲದಿದ್ದರೆ ಸಭೆ ಮಾಡುವ ಉದ್ದೇಶವಾದರೂ ಏನು? ಅರ್ಧ ದಿನ ಇಲ್ಲಿ ಚರ್ಚೆ ಮಾಡುವುದು ಯಾಕೆ? ನಿರ್ಣಯಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ ಯಾಕೆ ಎಂದು ಸದಸ್ಯ ವಿ.ಕೆ.ಎಂ.ಅಶ್ರಫ್ ಪ್ರಶ್ನಿಸಿದರು. ಈಗ ಕೂನೂನಿನಂತೆ ಸಂತೆ ಏಲಂ ನಡೆಸಿ ಪಂಚಾಯಿತಿಗೆ ನಷ್ಟವಾಗಿದೆ. ಸದಸ್ಯರ ನಿರ್ಣಯದಂತೆ ಶೇ.೧೦ರಷ್ಟು ಹೆಚ್ಚು ಮಾಡಿ ಕ್ರಮ ಕೈಗೊಂಡಿದ್ದರೆ, ಪಂಚಾಯಿತಿಗೆ ಲಾಭ ಆಗುತ್ತಿತ್ತು ಮತ್ತು ಸ್ಥಳೀಯರಿಗೆ ಆದ್ಯತೆಯೂ ಸಿಕ್ಕಿ ಜನರಿಗೂ ಸಹಾಯ ಆಗುತ್ತಿತ್ತು ಎಂದರು.
ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ವಹಿಸಿದ್ದರು. ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ., ಕಿರಿಯ ಅಭಿಯಂತರ ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಟೆಂಡರ್ ಮೊದಲೇ ಷರತ್ತು ವಿಧಿಸಬೇಕು

ಬೀದಿದೀಪಗಳಿಗೆ ಟೆಂಡರ್ ಆದ ಮೇಲೆ ಎಲ್‌ಇಡಿ ಅಥವಾ ಟ್ಯೂಬ್‌ಲೈಟ್ ಎಂದು ಕೇಳುವುದು ಸರಿಯಲ್ಲ. ಟೆಂಡರ್ ಮೊದಲೇ ಈ ಬಗ್ಗೆ ಷರತ್ತು ಹಾಕಬೇಕು ಎಂದು ಸದಸ್ಯ ರವಿಪ್ರಕಾಶ್ ಹೇಳಿದರು. ಟ್ಯೂಬ್ ಹಾಗೂ ಎಲ್‌ಇಡಿ ನಡುವಿನ ದರ ವ್ಯತ್ಯಾಸವನ್ನು ಮೊದಲೇ ಪರಿಶೀಲಿಸುವುದು ಉತ್ತಮ. ಟ್ಯೂಬ್ ಆದರೆ ಉತ್ತಮ ಹಾಗೆಂದು ಅದು ಸಂಪೂರ್ಣ ಸೆಟ್ ಸರಿ ಇರಬೇಕು ಎಂದು ಅಬ್ದುಲ್ ರಹಿಮಾನ್ ಹೇಳಿದರು. ಎಲ್‌ಇಡಿ ೧೦೦ ವಾಟ್ ಆಗಿ ಎರಡು ವರ್ಷ ಗ್ಯಾರಂಟಿ ನೀಡುವುದಾದರೆ ಅದರಲ್ಲಿ ಬೆಳಕು ಹೆಚ್ಚು ಅದೇ ಉತ್ತಮ ಎಂದು ಇಕ್ಬಾಲ್ ಹಾನೆಸ್ಟ್ ಹೇಳಿದರು.

ತೆರಿಗೆ ಹೆಚ್ಚಳ ಖಂಡನಾ ನಿರ್ಣಯಕ್ಕೆ ಆಗ್ರಹ

ಸರ್ಕಾರ ತೆರಿಗೆ ಹೆಚ್ಚಳ ಮಾಡಬೇಕು ಎಂದು ಹೇಳಿದರೆ ಸಾಲದು. ಜನರಿಂದ ತೆರಿಗೆ ಸಂಗ್ರಹ ಮಾಡಿ, ಅವರಿಗೆ ಏನಾದರೂ ಸವಲತ್ತು ಕೊಡಬೇಕಲ್ವಾ? ೮ ಲಕ್ಷ ರೂ. ಅನುದಾನಲ್ಲಿ ಏನು ಮಾಡಲಾಗುತ್ತದೆ? ಅನುದಾನ ಸರಿಯಾಗಿ ಬಾರದೆ ತೆರಿಗೆ ಹೆಚ್ಚಳ ಮಾಡುವುದು ತಪ್ಪು. ಹೆಚ್ಚು ಅನುದಾನ ನೀಡುವಂತೆ ವಿಪಕ್ಷದವರು ಸರ್ಕಾರವನ್ನು ಅಗ್ರಹಿಸಬೇಕು. ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಸದಸ್ಯ ಅರುಣ್ ವಿಟ್ಲ ಆಗ್ರಹಿಸಿದರು.

ಚರಂಡಿಗಳು ದುರಸ್ತಿಯಾಗಲಿ

ಮಳೆಗಾಲಕ್ಕೂ ಮುಂಚಿತವಾಗಿ ಚರಂಡಿಗಳನ್ನು ದುರಸ್ತಿ ಮಾಡಬೇಕು. ಸ್ಲ್ಯಾಬ್‌ಗಳನ್ನು ತೆಗೆದು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು. ಮಳೆ ನೀರು ರಸ್ತೆಯಲ್ಲಿ ಹರಿಯದೆ ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವಂತಿರಬೇಕು. ಕೆಲವು ಭಾಗದಲ್ಲಿ ಜೆಸಿಬಿಯಿಂದ ಕೆಲಸ ಮಾಡಲು ಅಸಾಧ್ಯವಾಗಿದ್ದು, ಕಾರ್ಮಿಕರನ್ನು ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net