ಮೊದಲ ಮಳೆಗೇ ಜಲಸಂಕಷ್ಟ VITTAL

ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಎಲ್ಲೆಂದರಲ್ಲಿ ನೀರು ಹರಿಯುತ್ತಿರುವುದು.
ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಎಲ್ಲೆಂದರಲ್ಲಿ ನೀರು ಹರಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಎಲ್ಲೆಂದರಲ್ಲಿ ನೀರು
  • ಅವ್ಯವಸ್ಥೆಯ ದರ್ಶನ - ಸಮರ್ಪಕ ಚರಂಡಿ ಇಲ್ಲದೆ ನದಿಯಂತಾದ ರಸ್ತೆಗಳು
ವಿಟ್ಲ: ಮಳೆಗಾಲ ಆರಂಭವಾಗುತ್ತಿದ್ದಂತೆ ಸಮಸ್ಯೆಗಳ ಸರಮಾಲೆಯೂ ಆರಂಭವಾಗಿದೆ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಬದಿಗಳಲ್ಲಿ ನೀರು ನಿಂತರೆ, ಕೆಲವು ಕಡೆ ರಸ್ತೆಯೇ ಮಳೆ ನೀರು ಹರಿಯುವ ಜಾಗವಾಗಿ ಮಾರ್ಪಾಡಾಗಿದೆ. ವಿಟ್ಲ ಪೇಟೆಯ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದು, ಕಾಸರಗೋಡು ರಸ್ತೆಯ ಅಂಗಡಿಯೊಂದರ ಮುಂಭಾಗ ನೀರಿನ ಬುಗ್ಗೆ ಪ್ರತ್ಯಕ್ಷವಾಗಿದೆ.
ವಿಟ್ಲ ಪೇಟೆಯ ಕಾಸರಗೋಡು ರಸ್ತೆ ಬದಿಯ ಅಂಗಡಿಯ ಮುಂದೆ ಪ್ರತ್ಯಕ್ಷವಾದ ನೀರಿನ ಬುಗ್ಗೆ.

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರಂಡಿಗಳ ದುರಸ್ತಿ ಬಗ್ಗೆ ಪ್ರಸ್ತಾಪವಾಗಿದರೂ, ಕಾಮಗಾರಿ ನಡೆಸದ ಕಾರಣ ನಾಲ್ಕು ಮಾರ್ಗ ಜಂಕ್ಷನ್‌ಗೆ ಸಾಲೆತ್ತೂರು ಹಾಗೂ ಕಾಸರಗೋಡು ರಸ್ತೆ ಭಾಗದಿಂದ ನೀರು ನುಗ್ಗುತ್ತಿದೆ. ಜಂಕ್ಷನ್ ೫೦ ಮೀಟರ್ ದೂರದಲ್ಲಿ ರಸ್ತೆಯ ಬದಿಯಲ್ಲಿ ಎರಡು ಕಡೆ ನೀರಿನ ಬುಗ್ಗೆ ಕಾಣಿಸಿಕೊಂಡಿದ್ದು, ಅಂಗಡಿಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳ ನಿರ್ಮಾಣದ ಬಳಿಕ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಕಬಕ ಜಂಕ್ಷನ್ ಸಮೀಪ ವಿಟ್ಲ ರಸ್ತೆಯ ಬದಿಯಲ್ಲಿ ನೀರು ನಿಂತು ಪಾದಚಾರಿಗಳ ಸಂಚಾರಕ್ಕೆ ತೊಡಗಾಗಿರುವುದು.

ವಿಟ್ಲ-ಕಬಕ ರಸ್ತೆಯಂತೂ ಜಲಾವೃತಗೊಂಡಿದ್ದು ಕಂಬಳಬೆಟ್ಟು ಆಸುಪಾಸಿನಲ್ಲಿ ನಾಲ್ಕರಿಂದ ಐದು ಕಡೆ ರಸ್ತೆ ತುಂಬಾ ನೀರು ನಿಂತಿದೆ. ಮೋರಿಯಿದ್ದರೂ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಅಳಿಕೆಮಜಲು, ಉರಿಮಜಲು, ಚಂದಳಿಕೆ ಭಾಗದಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕಬಕ ಪೇಟೆಯಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು ವಾಹನಗಳ ಆರ್ಭಟಕ್ಕೆ ಪಾದಚಾರಿಗಳಿಗ ನಡೆದಾಡಲೂ ಅಸಾಧ್ಯವಾಗಿದೆ.
ಚಂದಳಿಕೆ ಸಮೀಪ ತೇಪೆ ಕಿತ್ತು ಹೋಗಿ ನಿರ್ಮಾಣವಾದ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿದೆ.

ಅವ್ಯವಸ್ಥೆ ಬಗ್ಗೆಲೋಕಾಯುಕ್ತಕ್ಕೆ ಮಾಹಿತಿ

ಕೆಆರ್‌ಡಿಎಲ್ ಮೂಲಕ ಮರುಗುತ್ತಿಗೆಯಲ್ಲಿ ರಸ್ತೆ ನಿರ್ಮಾಣವಾಗಿದ್ದರೂ, ಕಾಮಗಾರಿ ನಂತರ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಎರಡು ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಬೇಕೆಂಬ ಷರತ್ತು ಪುಸ್ತಕಕ್ಕಷ್ಟೇ ಸೀಮಿತವಾಗಿದೆ. ರಾಜಕೀಯ ಬಲವನ್ನು ಬಳಸಿಕೊಂಡು ಅಧಿಕಾರಿಗಳ ಕೈಕಟ್ಟಿ ಹಾಕಲಾಗಿದೆ. ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ತೆರಳಿದ ಲೋಕಾಯುಕ್ತ ಅಧಿಕಾರಿಗಳು ರಸ್ತೆ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಅಳಿಕೆಮಜಲು ಸಮೀಪ ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ನೀರು.

ಕೆಲವೇ ತಿಂಗಳಲ್ಲಿ ಗುಂಡಿ ಸೃಷ್ಟಿ

ಕಬಕ-ವಿಟ್ಲ ರಸ್ತೆಯಲ್ಲಿ ಕಳಪೆ ಡಾಂಬರೀಕರಣದ ಬಗ್ಗೆ ವಿಜಯವಾಣಿ ವರದಿ ಮಾಡಿದ್ದು, ಈಗ ಹಲವು ಕಡೆಯಲ್ಲಿ ಮೇಲಿನ ಬಣ್ಣ ಕಿತ್ತು ಹೋಗಿ ಗುಂಡಿಗಳ ಪ್ರತ್ಯಕ್ಷವಾಗಿವೆ. ಚಂದಳಿಕೆ ಸಮೀಪದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದ್ದು, ಮಳೆ ನೀರು ನಿಂತು ಗುಂಡಿ ಇರುವುದು ಸವಾರರ ಅರಿವಿಗೆ ಬಾರದೆ ಅಪಾಯವನ್ನು ಆಹ್ವಾನಿಸುವಂತಿದೆ. ಮಳೆಗೆ ಇನ್ನಷ್ಟು ಗುಂಡಿಗಳು ಪ್ರತ್ಯಕ್ಷವಾಗುವ ಸಾಧ್ಯತೆಯಿದೆ.
"

ಸಭೆಗಳಲ್ಲಿ ಜನಪ್ರತಿನಿಽಗಳು ಅಽಕಾರಿಗಳ ಮುಂದೆ ಆಕ್ರೊಶಗಳನ್ನು ವ್ಯಕ್ತಪಡಿಸಿದಷ್ಟು ಕಾರ್ಯರೂಪದಲ್ಲಿ ಕಾಣುತ್ತಿಲ್ಲ. ಜನವರಿ ತಿಂಗಳಲ್ಲಿ ರಸ್ತೆಗೆ ತೇಪೆ ಕಾಮಗಾರಿ ನಡೆಸಲಾಗಿತ್ತು. ಆರು ತಿಂಗಳಲ್ಲೇ ಗುಂಡಿಗಳು ಕಾಣಿಸಲಾರಂಭಿಸಿವೆ. ಇನ್ನು ಮುಂದಿನ ಜನವರಿಯ ತನಕ ಗುಂಡಿಗಳಲ್ಲೇ ಸಂಚರಿಸಬೇಕಾದ ಸ್ಥಿತಿ ಇದೆ. ರಸ್ತೆಗೆ ನೀರು ನುಗ್ಗದಂತೆ ಸಮರ್ಪಕ ವ್ಯವಸ್ಥೆ ಮಾಡದಿರುವುದು ದುರದೃಷ್ಟಕರ

— ಸುಬ್ರಹ್ಮಣ್ಯ, ವಾಹನ ಸವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net