ವಿಟ್ಲದ ಕೋಟಿಕೆರೆಗೆ ಕಾಯಕಲ್ಪ VITTAL

ಭರದಿಂದ ನಡೆಯುತ್ತಿರುವ ಕೋಟಿಕೆರೆಯ ಹೂಳೆತ್ತುವ ಕಾರ್ಯ
ಭರದಿಂದ ನಡೆಯುತ್ತಿರುವ ಕೋಟಿಕೆರೆಯ ಹೂಳೆತ್ತುವ ಕಾರ್ಯ
Published on

ಪ್ರಮುಖ ಮುಖ್ಯಾಂಶಗಳು

  • ಜನಪ್ರತಿನಿಧಿಗಳ ನಿರುತ್ಸಾಹಕ್ಕೆ ಉದ್ಯಮಿಗಳ ಸೆಡ್ಡು
  • ೩.೫ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ
ವಿಟ್ಲ: ಪುರಾತನ ಇತಿಹಾಸವನ್ನು ಹೊಂದಿರುವ ಕೋಟಿಕೆರೆಯನ್ನು ವಿಟ್ಲ ಅರಮನೆಯ ದೈನಂದಿನ ಬಳಕೆಯ ಉದ್ದೇಶದಿಂದ ನಿರ್ಮಾಣ ಮಾಡಲಾಗಿತ್ತು. ಕೆಲವು ಸಮಯದಿಂದ ನಿರ್ವಹಣೆ ಕಾಣದ ಈ ಕೆರೆಯನ್ನು ವಿಟ್ಲದ ಉದ್ಯಮಿಗಳೇ ಸೇರಿಕೊಂಡು ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಇಬ್ಬರು ಪ್ರಾರಂಭಿಸಿದ ಕಾರ್ಯಕ್ಕೆ ಈಗ ೪೫ಕ್ಕೂ ಅಧಿಕ ಮಂದಿ ದಾನಿಗಳು ಕೈಜೋಡಿಸಿದ್ದು ಕೆರೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ.
ಕೋಟಿಕೆರೆ ಸುಮಾರು ೨೦ ಮಿಟರ್ ಅಗಲ, ೭೦ ಮಿಟರ್ ಉದ್ದವನ್ನು ಹೊಂದಿದ್ದು, ಮೂರು ಬದಿಗೆ ಈಗಗಾಲೇ ಕಲ್ಲಿನ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಇನ್ನೊಂದು ಬದಿಗೆ ಸುಮಾರು ೨೦ ಮೀಟರ್ ಕಟ್ಟೆಯನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿದ್ದು, ೫೦ ಮೀಟರ್ ಮಣ್ಣಿನಿಂದ ಕೂಡಿದೆ. ಉದ್ಯಮಿಗಳಾದ ಬಾಬು ವಿಟ್ಲ ಹಾಗೂ ಕ್ಲಿಫರ್ಡ್ ವೇಗಸ್ ಅವರು ಕೆರೆ ಅಭಿವೃದ್ಧಿಗೆ ಮುಂದಾಗಿದ್ದು, ಕುಸಿದ ಕಟ್ಟೆಗೆ ಕಲ್ಲಿನ ತಡೆಗೋಡೆ ನಿರ್ಮಿಸಲು ಮುಂದಾಗಿದ್ದರು. ದಾನಿಗಳ ಸಹಕಾರ ನೀಡಿದ್ದರಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಅಭಿವೃದ್ಧಿಯಾಗುತ್ತಿರುವ ಕೋಟಿಕೆರೆ ಸ್ಥಳಕ್ಕೆ ಹಿರಿಯ ವಕೀಲ ಡಾ.ಅರುಣ್ ಶ್ಯಾಮ್ ಭೇಟಿ ನೀಡಿದರು. ಉದ್ಯಮಿಗಳಾದ ಬಾಬು ವಿಟ್ಲ, ಕ್ಲಿಫರ್ಡ್ ವೇಗಸ್ ಇದ್ದರು.

ತಡೆಗೋಡೆ ದುರಸ್ತಿ: ಕೆರೆಯ ಸಂಪೂರ್ಣ ಹೂಳೆತ್ತುವ ಕಾರ್ಯ ನಡೆದಿದ್ದು, ದಕ್ಷಿಣ ಹಾಗೂ ಉತ್ತರ ಭಾಗದಲ್ಲಿ ಹಾನಿಯಾದ ತಡೆಗೋಡೆಯನ್ನು ದುರಸ್ತಿ ಮಾಡಲಾಗಿದೆ. ಪಶ್ಚಿಮ ಭಾಗದಲ್ಲಿ ಕಲ್ಲಿನ ತಡೆಗೋಡೆ ಗಟ್ಟಿಯಿದ್ದು, ಇದರ ಮೇಲೆ ಸಿಮೆಂಟ್ ಬೆಡ್ ಹಾಕಿದಲ್ಲಿ ಪೂರ್ವದಿಂದ ಈಜಿಕೊಂಡು ಹೋದವರಿಗೆ ನಿಲ್ಲುವುದಕ್ಕೆ ಸಹಕಾರಿಯಾಗಲಿದೆ. ಸುಮಾರು ೩.೫ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ದಾನಿಗಳು ಇನ್ನಷ್ಟು ಸಹಕಾರ ನೀಡಿದಲ್ಲಿ ಉತ್ತರ ಭಾಗದಲ್ಲಿ ಬಾಕಿ ಇರುವ ೫೦ ಮೀ. ಕಲ್ಲಿನ ಕಟ್ಟೆಯನ್ನು ಪೂರ್ಣಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಹತ್ತು ವರ್ಷವಾದರೂ ಗಟ್ಟಿಯಾಗಿರುವ ಕಲ್ಲಿನ ತಡೆಗೋಡೆ

೨೦೧೬ರಲ್ಲಿ ಕೆರೆಯ ಪೂರ್ವ ಭಾಗದಲ್ಲಿ ಬಾಬು ವಿಟ್ಲ ಅವರು ಕಲ್ಲಿನ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದರು. ೧.೬ ಲಕ್ಷ ರೂ. ಸ್ವಂತ ಹಣದಲ್ಲಿ ಕಾಮಗಾರಿಯನ್ನು ನಡೆಸಿದ್ದು, ೨೦ ಮೀ. ಉದ್ದದ ತಡೆಗೋಡೆಯನ್ನು ಸುಮಾರು ೧೨ ಅಡಿ ಎತ್ತರಕ್ಕೆ ನಿರ್ಮಾಣ ಮಾಡಲಾಗಿದೆ. ಹತ್ತು ವರ್ಷವಾದರೂ ಕಲ್ಲಿನ ತಡೆಗೋಡೆ ಇಂದಿಗೂ ಏನೂ ಆಗದೆ ಉಳಿದುಕೊಂಡಿದೆ. ಆದರೆ ಸರ್ಕಾರದಿಂದ ನಿರ್ಮಾಣವಾದ ತಡೆಗೋಡೆ ಹಾಳಾಗಿದ್ದು ಇದೀಗ ಅದರ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಕೆರೆಯಲ್ಲಿ ಈಜು ಕಲಿತ ಹಲವು ಮಂದಿ ಈಜು ತರಬೇತಿದಾರರಾಗಿ ಜೀವನ ಕಂಡುಕೊಂಡಿದ್ದಾರೆ.

ಶ್ರಮದಾನಕ್ಕೆ ಉತ್ಸಾಹವಿಲ್ಲ

ಬಾಬು ವಿಟ್ಲ ಅವರು ಯುವಕ ಮಂಡಲದಲ್ಲಿ ಸಕ್ರಿಯರಾಗಿ ೧೯೯೫ರಿಂದ ಕಾಶಿಯುವಕ ಮಂಡಲ ಹಾಗೂ ಸ್ಥಳೀಯ ಯುವಕರನ್ನು ಒಟ್ಟು ಸೇರಿಸಿ ಶ್ರಮದಾನ ಮೂಲಕ ಕೆರೆ ಹೂಳೆತ್ತುವುದು ಮತ್ತಿತರ ಕಾರ್ಯ ನಡೆಸುತ್ತಿದ್ದರು. ನಿರಂತರವಾಗಿ ನಡೆಯುತ್ತಿದ್ದ ಶ್ರಮಸೇವೆಗೆ ಇತ್ತೀಚಿನ ದಿನದಲ್ಲಿ ಆಸಕ್ತಿ ಕಡಿಮೆಯಾಗಿದೆ. ಈಗ ಹೂಳೆತ್ತುವ ಕಾರ್ಯಕ್ಕೆ ಕ್ರೇನ್, ಹಿಟಾಚಿಯಂತಹ ಯಂತ್ರಗಳನ್ನು ಅವಲಂಬಿಸಲಾಗಿದೆ.
"

ಸಣ್ಣಕೆರೆಯೊಂದರಲ್ಲಿ ೧೯೮೫ರಲ್ಲಿ ಈಜು ಕಲಿತಿದ್ದು, ಊರಿನ ಪ್ರತಿಯೊಬ್ಬರಿಗೆ ಈಜು ಗೊತ್ತಿರಬೇಕು ಎಂಬ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ. ಕೋಟೆಕೆರೆಯಲ್ಲಿ ಈಜು ಕಲಿತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೇರಿದ್ದಾರೆ. ಅಂಥ ಐತಿಹಾಸಿಕ ಕೆರೆ ಕುಸಿತವಾಗುವುದನ್ನು ನೋಡಿದಾಗ ಬೇಸರ ಆಗುತ್ತದೆ. ಈ ಕಾರಣದಿಂದ ದುರಸ್ತಿಗೆ ಮುಂದಾಗಿದ್ದೇವೆ. ಪ್ರತಿನಿತ್ಯ ಬೆಳಗ್ಗೆ ೬ರಿಂದ ೭ ಬಂದವರಿಗೆ ಈಗಲೂ ಈಜು ಹೇಳಿಕೊಡುವ ಕಾರ್ಯ ಮಾಡಲಾಗುತ್ತದೆ. ದುರಸ್ತಿ ಪೂರ್ಣಗೊಂಡ ಬಳಿಕ ಈಜು ಸ್ಪರ್ಧೆ ಆಯೋಜಿಸಲು ಯೋಜಿಸಲಾಗಿದೆ.

— ಬಾಬು ವಿಟ್ಲ, ಉದ್ಯಮಿ


"

ಕೋಟಿಕೆರೆಯಲ್ಲಿ ಈ ಭಾಗದ ಸಹಸ್ರಾರು ಮಂದಿ ಈಜು ಕಲಿತು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಸರ್ಕಾರದ ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ಸಾರ್ವಜನಿಕರು, ಸ್ಥಳೀಯರು ಮಾಡುತ್ತಿದ್ದಾರೆ. ಸ್ಥಳೀಯ ಯುವಕರ ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಅನುಸರಣೀಯ ಕಾರ್ಯವಾಗಿದ್ದು, ಇಂತಹ ಕೆಲಸಕ್ಕೆ ಕೈ ಜೋಡಿಸುವುದು ನಮ್ಮ ಕರ್ತವ್ಯವಾಗಿದೆ.

— ಡಾ.ಅರುಣ್ ಶ್ಯಾಮ್, ಹೈಕೋರ್ಟ್ ವಕೀಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net