ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಳೆದ ಐದು ವರ್ಷಗಳಲ್ಲಿ ೬೦೦ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿ ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡಿದೆ. ಈ ಮೂಲಕ ರಾಜ್ಯದಲ್ಲಿ ದಾಖಲೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ೩೨ ದತ್ತಿ ನಿಧಿಗಳಿದ್ದು, ಅತಿ ಹೆಚ್ಚು ಬಂಟ್ವಾಳದಲ್ಲೇ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.
ಕನ್ಯಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಸಾಪ, ಸರ್ಕಾರಿ ಪದವಿಪೂರ್ವ ಕಾಲೇಜು (ಕರ್ನಾಟಕ ಪಬ್ಲಿಕ್ ಸ್ಕೂಲ್) ಆಶ್ರಯದಲ್ಲಿ ನಡೆದ ನೀರ್ಪಾಜೆ ಭೀಮ ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಿ.ರಾಜೇಂದ್ರ ರೈ ಮಾತನಾಡಿ, ಸಾಧಕರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಾಹಿತ್ಯಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಬೇಕು. ಇದನ್ನು ಭೀಮ ಭಟ್ಟರು ಮಾಡಿದ್ದಾರೆ ಎಂದರು.
ತುಂಬೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಹಮಾನ್ ಡಿ.ಬಿ. ಮಾತನಾಡಿದರು. ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್‌ಡಿಎಂಸಿ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ರಹಮಾನ್, ಕನ್ಯಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ, ಪ್ರೌಢಶಾಲೆ ವಿಭಾಗ ಉಪಪ್ರಾಂಶುಪಾಲೆ ವಿನುತಾಕುಮಾರಿ, ಪತ್ರಕರ್ತ ಉದಯ ಶಂಕರ್ ನೀರ್ಪಾಜೆ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಸವಿತಾ ಸ್ವಾಗತಿಸಿದರು. ದಿವ್ಯಾ ವಂದಿಸಿದರು. ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.