ರಸ್ತೆಗಿಳಿಯಲು ಸವಾರರಿಗೇ ಭಯ! KABAKA

ಕಬಕ ಜಂಕ್ಷನ್‌ನಲ್ಲಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವಂತಾಗಿದೆ.
ಕಬಕ ಜಂಕ್ಷನ್‌ನಲ್ಲಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವಂತಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಕಂಬಳಬೆಟ್ಟು, ನಿಣ್ಣಿಂಕಲ್ಲು, ನೀರಕಣಿಯಲ್ಲಿ ಬಾಯ್ತೆರೆದ ಗುಂಡಿಗಳು
  • ಪಾದಚಾರಿಗಳಿಗೂ ನಿತ್ಯ ಸಮಸ್ಯೆ । ದುಸ್ತರವಾದ ವಾಹನ ಸಂಚಾರ
ಪುತ್ತೂರು: ಬೇಸಿಗೆ ಕಾಲದಲ್ಲಿ ಗುಣಮಟ್ಟದ ತೇಪೆ ಕಾಮಗಾರಿ ನಡೆಸದ ಪರಿಣಾಮ ಇಂದು ಸಣ್ಣ ಮಳೆಗೂ ತೇಪೆ ಮೇಲೆದ್ದು ರಸ್ತೆಗಳ ಗುಂಡಿಗಳು ಬಾಯ್ತೆರೆದು ಅಪಾಯವನ್ನು ಆಹ್ವಾನಿಸುತ್ತಿವೆ. ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರುವ ನೆಪದಲ್ಲಿ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಪರಿಣಾಮ ಪಾದಚಾರಿಗಳು, ವಾಹನ ಸವಾರರು ನಿತ್ಯವೂ ಸಂಚಾರಕ್ಕೆ ಪರದಾಡುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ರಸ್ತೆಗಳ ಪರಿಸ್ಥಿತಿ ಹೀಗೆಯೇ ಇದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ.
ಎಲ್ಲೆಲ್ಲಿ ಸಮಸ್ಯೆ?: ಕಂಬಳಬೆಟ್ಟು ಭಾಗದಲ್ಲಿ ಸಮರ್ಪಕ ಮೋರಿಯಿಲ್ಲದೆ ನೀರು ರಸ್ತೆಯಲ್ಲೇ ಹರಿದು ಡಾಂಬರು ಕಿತ್ತು ಹೋಗಿದೆ. ನಿಣ್ಣಿಂಕಲ್ಲು ರಸ್ತೆ ಮುಖ್ಯ ರಸ್ತೆಯನ್ನು ಸೇರುವ ಸ್ಥಳದಲ್ಲಿ ಡಾಂಬರು ಕಿತ್ತು ಬಂದು ಹೊಂಡಗಳು ಸೃಷ್ಟಿಯಾಗಿವೆ. ಕಬಕ ಸಮೀಪದ ನೀರಕಣಿಯಲ್ಲಿ ಡಾಂಬರು ಎದ್ದು ಹೋಗಿ ಗುಂಡಿಗಳು ಪ್ರತ್ಯಕ್ಷವಾಗುತ್ತಿವೆ. ತಿರುವಿನಲ್ಲೇ ಡಾಂಬರು ಕಿತ್ತುಬಂದಿದ್ದು ಅಪಾಯಕಾರಿಯಾಗಿದೆ. ಕಬಕ ಪೇಟೆಯ ರಸ್ತೆಯಲ್ಲಂತೂ ಭಾರಿ ಗುಂಡಿಗಳು ಉಂಟಾಗಿ ವಾಹನ ಓಡಾಟಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.
ರಸ್ತೆಯಲ್ಲಿ ವಾಹನ ಓಡಿಸಲು ಸಾರ್ವಜನಿಕರು ಭಯ ಬೀಳುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ. ಈಗಾಗಲೇ ಚರಂಡಿಗಳ ನಿರ್ವಹಣೆಯನ್ನು ಕಾಟಾಚಾರಕ್ಕೆ ನಡೆಸಿದ್ದು, ಹಲವು ಕಡೆಯಲ್ಲಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ರಸ್ತೆಗಳು ಹಾನಿಯಾಗುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಇನ್ನು ನಿರಂತರ ಭಾರಿ ಮಳೆಯಾದರೆ ರಸ್ತೆಗಳು ಕೆರೆಯಂತಾಗಿ ಸಂಚಾರವೇ ದುಸ್ತರವೆನಿಸಲಿದೆ.
ನಿಣ್ಣಿಂಕಲ್ಲು ಜಂಕ್ಷನ್‌ನಲ್ಲಿ ಡಾಂಬರು ಕಿತ್ತು ಹೋಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವುದು.

ಚರಂಡಿ ನಿರ್ವಹಣೆಗೆ ಅನುದಾನವಿಲ್ಲ!

ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ ಕಾಮಗಾರಿಗೆ ಮಾತ್ರವೇ ಅನುದಾನ ನೀಡುತ್ತಿದ್ದು ಚರಂಡಿ ದುರಸ್ತಿಗೆ ಅನುದಾನ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ಇದು ಗುತ್ತಿಗೆದಾರರಿಗೂ ವರದಾನವಾಗಿ ಪರಿಣಮಿಸಿದೆ. ಮಳೆಗಾಲಕ್ಕೆ ಮೊದಲು ಕಪ್ಪು ಬಣ್ಣದ ಜಲ್ಲಿಯನ್ನು ಗುಂಡಿಗಳಿಗೆ ಸುರಿದು ರೋಲರ್‌ ಓಡಿಸಿ ಕಾಟಾಚಾರಕ್ಕೆ ದುರಸ್ತಿ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಜಲ್ಲಿ ಎದ್ದುಹೋಗುತ್ತಿದ್ದಂತೆ ಮಳೆಯ ಕಾರಣ ನೀಡಿ ಜಾರಿಕೊಳ್ಳುವುದು ರೂಢಿಯಾಗಿದೆ. ಹೊಸ ರಸ್ತೆ ನಿರ್ಮಾಣ ವೇಳೆ ಚರಂಡಿ ದುರಸ್ತಿ ಮಾಡಿದ್ದು ಬಿಟ್ಟರೆ ಬಳಿಕ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ.

ಕಾಂಕ್ರೀಟ್‌ ಕಾಮಗಾರಿ ನಿರೀಕ್ಷೆ

ವಿಟ್ಲ- ಕಬಕ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಪುತ್ತೂರು ಶಾಸಕರು ಅನುದಾನ ತರುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಕಂಬಳಬೆಟ್ಟು ಹಾಗೂ ಕಲ್ಲಕಟ್ಟದಲ್ಲಿ ನಿರ್ಮಾಣವಾಗಬೇಕಾದ ಸೇತುವೆಗೆ ಅನುದಾನ ತಂದಿದ್ದಾರೆ. ಹಿಂದಿನ ಲೋಕೋಪಯೋಗಿ ಸಚಿವರು ಸ್ಥಳ ಪರಿಶೀಲನೆ ನಡೆಸಿದ್ದರು. ಮಳೆಗಾಲ ಮುಗಿಯುತ್ತಿದ್ದಂತೆ ಹೊಸ ಕಾಂಕ್ರೀಟ್‌ ರಸ್ತೆ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ.
ಕಂಬಳಬೆಟ್ಟು ಭಾಗದಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆ ಎಲ್ಲಿದೆ ಎಂದು ಹುಡುಕವಂತಹ ಸ್ಥಿತಿ ನಿರ್ಮಾಣವಾಗಿದೆ.

ಎರಡು ಬಾರಿ ಹೊಂಡ ಮುಚ್ಚಿದರೂ ನಿಲ್ಲುತ್ತಿಲ್ಲ

ರಸ್ತೆಯನ್ನು ಎಸ್‌ಎಚ್‌ಡಿಪಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ್ದು ನಿರ್ವಹಣೆಯ ಹೊಣೆಯನ್ನು ಲೋಕೋಪಯೋಗಿ ಇಲಾಖೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಎರಡು ಬಾರಿ ಗುಂಡಿಗಳಿಗೆ ಬಿಎಸ್‌ಬಿ ತುಂಬಿ ಸಮತಟ್ಟು ಮಾಡಿದರೂ, ಎಲ್ಲವೂ ಮಳೆಗೆ ಕೊಚ್ಚಿ ಹೋಗುತ್ತಿದೆ. ಮುಖ್ಯ ರಸ್ತೆಯನ್ನು ಸಂ˜ಸುವ ಪಂಚಾಯಿತಿ ರಸ್ತೆಗಳಲ್ಲಿ ಚರಂಡಿಗಳನ್ನು ಸಮರ್ಪಕವಾಗಿ ಮಾಡದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕೆಲವು ಭಾಗದಲ್ಲಿ ಒಳರಸ್ತೆಯಿಂದ ಮುಖ್ಯ ರಸ್ತೆಗೆ ನೀರು ಹರಿಯುವುದೇ ಸಮಸ್ಯೆಯಾಗಿ ಪರಿಣಮಿಸಿದೆ.
"

ವಿಟ್ಲ- ಕಬಕ ರಸ್ತೆಯಲ್ಲಿ 2017ರ ನಂತರ ಜನರು ನೆಮ್ಮದಿಯಿಂದ ಸಂಚರಿಸದಂತಹ ಸ್ಥಿತಿ ಇದೆ. ಪ್ರತಿ ಮಳೆಗಾಲದಲ್ಲೂ ಸೃಷ್ಟಿಯಾಗುವ ಗುಂಡಿಗಳಿಗೆ ವೆಟ್‌ ಮಿಕ್ಸ್‌ ಹಾಕುವುದಕ್ಕೂ ಗುತ್ತಿಗೆದಾರರು ಮುಂದಾಗುತ್ತಿಲ್ಲ. ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡದ ತಪ್ಪು ಮಾಡಿದ್ದೇವೆ. ಪರಿಶೀಲನೆ ನಡೆಸಿದ ಬೆಂಗಳೂರು ಮೂಲದ ಅಧಿಕಾರಿಗಳು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ದಾಖಲೆಯಲ್ಲಿ ತೋರಿಸಿ ನಾಪತ್ತೆಯಾಗಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

— ವಿ.ಎಸ್‌. ಪುಣಚ, ಸಾಮಾಜಿಕ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net